ರೇಪ್ ಕೇಸಿನಲ್ಲಿ ಜೈಲು ಪಾಲಾದ ಪ್ರೇಮಿಯನ್ನು ಬಿಡಿಸಲು ಆಕೆ ಒಂದು ತಂತ್ರ ಹೂಡಿದ್ದಳು | ಅದಕ್ಕಾಗಿ ಆಕೆ 3 ವರ್ಷ ಹೊಂಚು ಹಾಕಿ ಕೂತಿದ್ದಳು !
ಅಲಿಗಢ: ಇದು ಅಪ್ರಾಪ್ತೆಯೊಬ್ಬಳ ಪ್ರೇಮ ಕಥೆ. ಉತ್ತರ ಪ್ರದೇಶದ ಅಲಿಗಢದ 15 ವರ್ಷದ ಖುಷಿ ಮತ್ತು ವರುಣ್ ಎಂಬ ಜೋಡಿ ಚಿಕ್ಕ ವಯಸ್ಸಿಗೇ ಪ್ರೀತಿಯ ಸುಖ ಅನುಭವಿಸಲು ಹೊರಟಿತ್ತು. ಹಾಗೆ ಪ್ರೇಮಪಾಶದಲ್ಲಿ ಬಿಗಿಯಾಗಿ ಸಿಲುಕಿ, ಬಂಧಿಯಾಗಿ ನಂತರ ಅನುಭವಿಸಬಾರದ್ದನ್ನೆಲ್ಲಾ ಅನುಭವಿಸಿದ ಕಥೆ ಇದು. ಕೊನೆಗೆ ಗೆದ್ದದ್ದು ಯಾರು, ಸೋತದ್ದು ಎಲ್ಲಿ, ಏನಾಯಿತು ಎಂಬುದೇ ತೀವ್ರ ಕುತೂಹಲದ ಕಥೆ.
15 ವರ್ಷದ ಖುಷಿಗೆ ವರುಣ್ ಎಂಬಾತನ ಜತೆ ಪ್ರೇಮ ಪಲ್ಲವಿಸಿತ್ತು. ಆದರೆ ಪ್ರೀತಿ ಪ್ರಾಪ್ತವಾಗಲು ಆಕೆ ಇನ್ನೂ ಅಪ್ರಾಪ್ತೆ. ಆ ಕಾರಣ, ಯಾರೂ ಈ ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದಿತ್ತು. ಅವರ ವಿಷಯ ತಿಳಿದು ಖುಷಿಯ ಪಾಲಕರು ಕೆಂಡಾಮಂಡಲರಾದರು. ಇದೇ ಕಾರಣಕ್ಕೆ ಅದೊಂದು ದಿನ ಖುಷಿ ಮತ್ತು ವರುಣ್ ಮನೆ ಬಿಟ್ಟು ಪರಾರಿಯಾಗಿದ್ದರು. ಆದರೆ, ಪೊಲೀಸ್ ಕಂಪ್ಲೇಂಟ್ ನೀಡಿರುವ ಖುಷಿಯ ಪಾಲಕರು ಇವರನ್ನು ಸುಲಭದಲ್ಲಿ ಹುಡುಕುವಲ್ಲಿ ಯಶಸ್ವಿಯಾಗಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ತಿಳಿದಿದ್ದರೂ ವರುಣ್ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಕೇಸ್ ದಾಖಲಾಗಿತ್ತು. ಕಾರಣ, ಕಾನೂನಿನ ಪ್ರಕಾರ ಆಕೆಗೆ ಮದುವೆಗೆ ಬೇಕಾದ ಕನಿಷ್ಟ ಪ್ರಾಯ ಪ್ರಾಪ್ತವಾಗಿಲ್ಲ.
ಖುಷಿ ಎಷ್ಟೇ ಗೋಗರೆದರೂ, ತಾನು ಇಷ್ಟಪಟ್ಟು ಆತನ ಜತೆ ಹೋದದ್ದು ಅಂದರೂ, ಅದನ್ನು ಪಾಲಕರಾಗಲಿ, ಕಾನೂನಾಗಲಿ ಸಪೋರ್ಟ್ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆದುದರಿಂದ ಪಾಲಕರು ಹಾಕಿದ ಕೇಸ್ ಗೆದ್ದಿತ್ತು. ವರುಣ್ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದರು. ಇನ್ನೂ 15 ವರ್ಷವಾದ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಅರಿತ ಖುಷಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಆದರೂ ಆಕೆ ವರುಣ್ ನನ್ನು ಮರೆಯಲಿಲ್ಲ. ವರುಣ್ನನ್ನೇ ತಾನು ಮದುವೆಯಾಗುವುದಾಗಿ ಪಟ್ಟು ಹಿಡಿದು ಕುಳಿತಳು. ಆದರೆ ಆತ ಈಗ ಜೈಲು ಹಕ್ಕಿ. ಅವನೊಂದಿಗೆ ಮಾತನಾಡಿದರೂ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಾಲಕರು ಬೆದರಿಕೆ ಒಡ್ಡಿ ಆಕೆಯನ್ನು ಕಟ್ಟಿ ಹಾಕಿ ಕೂತಿದ್ದರು. ಹುಡುಗಿ ಮೌನಿಯಾದಳು. ಮಾತು ಕತೆ ಬಿಟ್ಟಳು. ಅಪ್ಪ- ಅಮ್ಮ ಹೇಳಿದಂತೆಯೇ ಕೇಳುವುದಾಗಿ ಹೇಳಿದಳು. ಮೂರು ವರ್ಷ ಪ್ರಿಯತಮನ ಕನಸು ಕಣ್ಣಲ್ಲಿ ತುಂಬಿಕೊಂಡು ಖುಷಿ ಅಂದರೇನೆಂದು ಕಳೆದಳು ಖುಷಿ.
ಆದರೆ ಸುಪ್ತವಾಗಿ ಮನಸ್ಸು ಆತನನ್ನು ಬಯಸಿತ್ತು. ಆದರೆ ಆತನನ್ನು ನೆನಪಿಸಿಕೊಳ್ಳುವುದು ಆಕೆಯ ಪ್ರತಿಕ್ಷಣದ ಕಾಯಕ ಆಗಿತ್ತು. ಆದರೆ ಅದನ್ನು ಯಾವುದೇ ಕಾರಣಕ್ಕೂ ಆಕೆಯ ಅಪ್ಪ ಅಮ್ಮನಿಗೆ ಆಕೆ ತೋರ್ಪಡಿಸಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಏನೂ ಮಾತನಾಡದೆ ಆಕೆ ಶಬರಿಯಂತೆ ಕಾದಿದ್ದಳು. ಆತನನ್ನು ಮಗಳು ಮರೆತಳು ಎಂದು ಪಾಲಕರು ಸಂತಸದಿಂದ ಇದ್ದರು.
ಆದರೆ ಆಕೆ ಅದೊಂದು ದಿನ ದಿಡಗ್ಗನೆ ಎದ್ದು ಕೂತಿದ್ದಳು. ಖುಷಿಗೆ ಯಾವಾಗ 18 ತುಂಬಿತೋ, ಆಗ ಆಕೆ ಒಂದು ದಿನವೂ ತಡಮಾಡಲಿಲ್ಲ. ಮರುದಿನ ಆಕೆ ಬೆಳ್ ಬೆಳಗ್ಗೆ ಮಹಿಳಾ ಆಯೋಗದ ಬಾಗಿಲು ತಟ್ಟಿದ್ದಳು. ಮಹಿಳಾ ಆಯೋಗದ ಸಹಾಯದಿಂದ ಕೋರ್ಟ್ ಬಾಗಿಲು ತಟ್ಟಿದ್ದಳು. ತನ್ನೆಲ್ಲಾ ಕಥೆಯನ್ನು ಹೇಳಿದ ಆಕೆ ಪ್ರೇಮಿ ಬಿಡುಗಡೆ ಮಾಡುವಂತೆ ಮನವಿ ಮಾಡಿದಳು. ಯುವತಿಯ ಮಾತನ್ನು ಕೇಳಿದ ಕೋರ್ಟ್ ಕೂಡ ಈಕೆಯ ಪ್ರೇಮಕ್ಕೆ ತಲೆಬಾಗಿತು. ಆಕೆಯ ಪರವಾಗಿ ತೀರ್ಪು ನೀಡಿತು. ವರುಣನಿಗೆ ಬಿಡುಗಡೆಗೆ ಕೋರ್ಟ್ ಆದೇಶ ನೀಡಿತ್ತು. ನಂತರ ಖುಷಿ ಮತ್ತು ವರುಣ್ ಕುಟುಂಬದ ಸದಸ್ಯರ ವಿರೋಧದ ನಡುವೆಯೂ ಮದುವೆ ಆಗಿತ್ತು. ಸರಿಯಾದ ಸಮಯಕ್ಕೇ ಹೊಂಚು ಹಾಕಿ ಕೂತರೆ, ಯಾವ ಪ್ರೀತಿಯನ್ನು ಕೂಡಾ ಗೆಲ್ಲಬಹುದು ಎಂಬುದಕ್ಕೆ ಇದೊಂದು ನಿದರ್ಶನ.