ವಸಂತ ಬಂಗೇರರನ್ನು ನೆನಪಿಸಿಕೊಂಡ ಯಡಿಯೂರಪ್ಪ, ತನ್ನ ಹಳೆಯ ಸಹವರ್ತಿಯನ್ನು ಹೊಗಳಿದ ವಸಂತ ಬಂಗೇರ !
ಮಾಜಿ ಶಾಸಕರು, ಮಾಜಿ ಮುಖ್ಯ ಸಚೇತಕರು ಆಗಿದ್ದ ವಸಂತ ಬಂಗೇರ ಅವರು ಯಡಿಯೂರಪ್ಪ ಅವರೊಂದಿಗೆ ಮೊಟ್ಟಮೊದಲ ಬಾರಿಗೆ ಕಮಲ ಅರಳಿಸಿದ ಹೆಗ್ಗಳಿಕೆ ಹೊಂದಿದವರು. ವಸಂತ ಬಂಗೇರ ಅವರು ನಿನ್ನೆ ಪದತ್ಯಾಗ ಮಾಡಿದ ಯಡಿಯೂರಪ್ಪನವರ ಬಗ್ಗೆ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪ ಸೋಮವಾರ ನಡೆದ ಸಾಧನಾ ಸಮಾವೇಶದಲ್ಲಿ ವಸಂತ ಬಂಗೇರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಬೆಳ್ತಂಗಡಿ ಶಾಸಕರಾಗಿದ್ದ ವಸಂತ ಬಂಗೇರ ಯಡಿಯೂರಪ್ಪ ಬಿಜೆಪಿ ಅರಳಿಸಿ ವಿಧಾನಸಭೆಯ ಮೆಟ್ಟಿಲು ಹತ್ತಿದವರು. ಈ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಖಾತೆ ತೆರೆದವರು. ಆದರೆ ನಂತರ ಬಂಗೇರ ಬಿಜೆಪಿ ತ್ಯಜಿಸಿದರೆ ಯಡಿಯೂರಪ್ಪ ಬಿಜೆಪಿಯಲ್ಲೇ ಉಳಿದರು.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಿಗೆ ವಸಂತ ಬಂಗೇರ ಅವರು ತಮ್ಮ ರಾಜಕೀಯ ಒಡನಾಡಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ವಸಂತ ಬಂಗೇರ ಅವರ ಹೆಸರನ್ನು ಎರಡೆರಡುಬಾರಿ ಪ್ರಸ್ತಾಪಿಸಿದ್ದಾರೆ.
ಯಡಿಯೂರಪ್ಪ ಈಗಲೂ ಹೋರಾಟದ ಮನೋಭಾವ ಮೈಗೂಡಿಸಿಕೊಂಡೆ ಇದ್ದಾರೆ. ನಾವಿಬ್ಬರೂ ಸುಮಾರು 8ವರ್ಷಗಳ ಕಾಲ ಒಂದಾಗಿ ಇದ್ದವು. ಆಗ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿರಲಿಲ್ಲ. ಒಂದೇ ಪಕ್ಷದ ಶಾಸಕರಾಗಿದ್ದ ನಾವಿಬ್ಬರೂ ಬಹಳ ಅನ್ನೋನ್ಯತೆಯಿಂದ ಇದ್ದೇವು. ಶಾಸನಸಭೆಯಲ್ಲಿ ಇಬ್ಬರೂ ಒಟ್ಟಾಗಿ ಹೋರಾಟ ಮಾಡುತ್ತಿದ್ದೆವು. 1985 ರಲ್ಲಿ ಕರ್ನಾಟಕದಲ್ಲಿ ನಾನು ಮತ್ತು ಯಡಿಯೂರಪ್ಪ ಬಿಜೆಪಿಯಲ್ಲಿ ವಿಧಾನಸಭಾ ಸದಸ್ಯರಾಗಿ ಒಟ್ಟಿಗೆ ಇದ್ದೆವು. ಅವರೊಬ್ಬ ಹೋರಾಟ ನಡೆಸಿ ವಿಜಯಿಯಾಗಿದ್ದಾರೆ ಎನ್ನಲು ಇಷ್ಟಪಡುತ್ತೇನೆ. ರಾಜೀನಾಮೆ ನೀಡುವ ಸಂದರ್ಭದಲ್ಲಿ ನನ್ನ ಹೆಸರು ಹೇಳುವ ಅವಶ್ಯಕತೆ ಇರಲಿಲ್ಲ. ಆದರೆ ಎರಡೆರಡು ಸಲ ನನ್ನನ್ನು ನೆನಪಿಸಿಕೊಂಡಿದ್ದಾರೆ ಎಂದರೆ ಬಹಳ ಖುಷಿಯಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಅವರು ಮಾತು ಉಳಿಸಿಕೊಂಡ ನಾಯಕ ಎಂದು ವಸಂತ ಬಂಗೇರ ಅವರು ತಮ್ಮ ಒಂದು ಕಾಲದ ರಾಜಕೀಯ ಒಡನಾಡಿಯನ್ನು ಮನದುಂಬಿ ಅಭಿನಂದಿಸಿದರು. ಅವರ ಹೋರಾಟದ ಹಾದಿಯನ್ನು ಮೆಲುಕು ಹಾಕಿದರು.