ಯಡಿಯೂರಪ್ಪ ಯುಗಾಂತ್ಯ | ಅರ್ಧ ಶತಮಾನದ ಪವರ್ ಫುಲ್ ರಾಜಕಾರಣಿ ನೇಪಥ್ಯಕ್ಕೆ !

ಸಿಎಂ ಬಿ.ಎಸ್ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ರಾಜಭವನಕ್ಕೆ ತೆರಳಿ ಅವರು ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರು ಯಡಿಯೂರಪ್ಪರವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಈ ಮೂಲಕ ಯಡಿಯೂರಪ್ಪನವರು ರಾಜೀನಾಮೆ ನೀಡುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಇದ್ದ ಅನುಮಾನದ ಸಂದಿಗ್ಧತೆ ಕೊನೆಗೊಂಡಿದೆ.

 

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು 75 ವರ್ಷ ಮೇಲ್ಪಟ್ಟ ನಾಯಕರಿಗೆ ಸ್ಥಾನಮಾನ ಕೊಡುವುದಿಲ್ಲ ಎಂಬ ತೀರ್ಮಾನವನ್ನು ತೆಗೆದುಕೊಂಡರು. ಯಾರಿಗೂ ಅವಕಾಶ ಕೊಡಲಿಲ್ಲ. ಆದರೆ, ನನಗೆ ಅತ್ಯಂತ ವಾತ್ಸಲ್ಯ, ಪ್ರೀತಿ ಮತ್ತು ವಿಶ್ವಾಸದಿಂದ ಅವಕಾಶ ಮಾಡಿಕೊಟ್ಟರು. ಎರಡು ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು ಎಂದು ಕಣ್ಣೀರಾಕುತ್ತಲೇ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ರಾಜೀನಾಮೆ ಘೋಷಣೆ ಮಾಡಿದರು.

ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಬಿಎಸ್‌ವೈ, ಆರಂಭದಿಂದಲೇ ತುಂಬಾ ಭಾವುಕವಾಗಿ ಮಾತನಾಡಿದರು. ನಮ್ಮನ್ನು ಮಾತನಾಡಿ 50 ಮಂದಿ ಸಿಗದೇ ಇರುವ ಕಾಲದಲ್ಲಿ ಎಲ್ಲ ಕಾರ್ಯಕತರ ಜತೆಗೂಡಿ ರಾಜ್ಯಾದ್ಯಂತ ಪಾದಾಯಾತ್ರೆ ಮಾಡಿ ಪಕ್ಷ ಬಲಪಡಿಸುವ ಕೆಲಸ ಮಾಡಿದ್ದೇನೆ. ನಾನೆಂದು ಹಿಂದೆ ತಿರುಗಿ ನೋಡಲೇ ಇಲ್ಲ. ನನ್ನ ಕರ್ತವ್ಯವನ್ನು ಜನಮೆಚ್ಚುವ ರೀತಿಯಲ್ಲಿ ನಿರ್ವಹಿಸಿದೆ ಎಂಬ ತೃಪ್ತಿ ಮತ್ತು ಸಮಾಧಾನ ನನಗಿದೆ ಎಂದರು. ಯಡಿಯೂರಪ್ಪ ನವರ ರಾಜಕೀಯ ಜೀವನದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

ಯಡಿಯೂರಪ್ಪ ರಾಜಕೀಯ ಜೀವನದ ಬಗ್ಗೆ ಸಮಗ್ರ ಮಾಹಿತಿ

ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ಹುಟ್ಟಿದ, ಬೆಳೆದ ವಾತಾವರಣದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು. ಹಾಗಿದ್ದರೂ, ಬಿ.ಎಸ್.ಯಡಿಯೂರಪ್ಪ ಅವರು ಅದರತ್ತ ಆಕರ್ಷಿತರಾಗಲಿಲ್ಲ. ಅವರು ಟ್ರೆಂಡ್ ನ ವಿರುದ್ಧ ದಿಕ್ಕಿನಲ್ಲಿ ಈಜಲು ಆರಂಭಿಸಿದ್ದರು. ಆಗ ಚಾಲ್ತಿಯಲ್ಲಿದ್ದ ಗೆಲ್ಲಲು ಸುಲಭವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಅವರು ಆಯ್ಕೆಮಾಡಿಕೊಳ್ಳಲಿಲ್ಲ. ಬಹುಶಃ ಅದೇ ಅವರಿಗೆ ವರವಾಗಿ ಪರಿಣಮಿಸಿರಬೇಕು. ಅಂದಿನಿಂದ ಇಂದಿನವರೆಗೆ ಸುದೀರ್ಘ ಅರ್ಧ ಶತಮಾನಗಳ ರಾಜಕೀಯ ಪ್ರವಾಸದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಬಲವಾಗಿ ಊರುತ್ತಾ, ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸುತ್ತಲಲೇ ನಡೆದು, ನಿನ್ನೆ ತನ್ನ ಕೊನೆಯ ದಿನದ ಅಧಿಕಾರ ನಡೆಸಿ ಕರ್ನಾಟಕ ರಾಜ್ಯದ ಅತ್ಯುನ್ನತ ಪದವಿಯಿಂದಲೇ ಅವರು ನಿವೃತ್ತರಾಗುತ್ತಿದ್ದಾರೆ.

ಹೋರಾಟದಿಂದಲೇ ರಾಜಕಾರಣದಲ್ಲಿ ಹೆಜ್ಜೆಗುರುತು ಮೂಡಿಸಿದ ಬಿ.ಎಸ್.ಯಡಿಯೂರಪ್ಪ (ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ) ಅವರ ಹುಟ್ಟೂರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆ. ಕೃಷಿಕರಾದ ಸಿದ್ದಲಿಂಗಪ್ಪ ಹಾಗೂ ಪುಟ್ಟತಾಯಮ್ಮ ತಂದೆ-ತಾಯಿ. ಈ ಕುಟುಂಬ ಕೆಲಸಕ್ಕಾಗಿ ಶಿಕಾರಿಪುರಕ್ಕೆ ಬಂತು. ಅದು ಮುಂದೆ ಅವರ ರಾಜಕೀಯ ಕಾರ್ಯಕ್ಷೇತ್ರವೂ ಆಯಿತು. ಅದೇ ಊರಿನ ಮೈತ್ರಾದೇವಿ ಕೈಹಿಡಿದು ಶಿಕಾರಿಪುರದ ಅಳಿಯ ಎನಿಸಿಕೊಂಡರು.

ಯಡಿಯೂರಪ್ಪ ಸವೆಸಿದ ಕಷ್ಟದ ಹಾದಿ

ಇಪ್ಪತ್ತೆರಡು ವರ್ಷದವರಿದ್ದಾಗ ಆರ್‌ಎಸ್‌ಎಸ್ ಸೇರಿದರು. ಹೋರಾಟ- ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು 1970ರಲ್ಲಿ ಶಿಕಾರಿಪುರ ತಾಲ್ಲೂಕು ಕಾರ್ಯವಾಹರಾಗಿ (ಕಾರ್ಯದರ್ಶಿ) ನೇಮಕಗೊಂಡರು. 1972ರಲ್ಲಿ ಜನಸಂಘದ ತಾಲ್ಲೂಕು ಅಧ್ಯಕ್ಷರೂ ಆದರು. 1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾದರು. ಎರಡೇ ವರ್ಷದಲ್ಲಿ ಅಧ್ಯಕ್ಷ ಪಟ್ಟವೂ ಸಿಕ್ಕಿತು. 1977ರಲ್ಲಿ ಜನಸಂಘದ ತಾಲ್ಲೂಕು ಕಾರ್ಯದರ್ಶಿಯಾಗಿ ಆಯ್ಕೆಯಾದರು. 1980ರಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನೇಮಕವಾದರು.

1983ರಲ್ಲಿ ಶಿಕಾರಿಪುರದಿಂದ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿ, ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಘೋಷಿಸಿ ರೈತರ ಸಾಲ ಮನ್ನಾ ಮಾಡಿಸಲು ಹೋರಾಡಿದ್ದರು. 1985ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. 1988ರಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಸಂಘಟನಾ ಚಾತುರ್ಯ ಗಮನಿಸಿದ ಬಿಜೆಪಿಯು 1992ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಜವಾಬ್ದಾರಿ ವಹಿಸಿತ್ತು. 1994ರಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಹೆಸರು ಪಡೆದರು.

1995ರಲ್ಲಿ 2ನೇ ಬಾರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. 1999ರ ವಿಧಾನಸಭೆ ಚುನಾವಣೆಯಲ್ಲಿ ಸೋಲಾಯಿತು. ಆದರೆ, ಅದೇ ವರ್ಷ ಪಕ್ಷ ಅವರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಿತು. 2003ರಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. 2004ರಲ್ಲಿ 2ನೇ ಬಾರಿ ಪ್ರತಿಪಕ್ಷ ನಾಯಕನಾಗುವ ಅವಕಾಶ ಅವರಿಗೇ ಒದಗಿಬಂತು.

2004ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಸರ್ಕಾರ 20ತಿಂಗಳಲ್ಲಿ ಪತನವಾದ ನಂತರ ಕುಮಾರಸ್ವಾಮಿ ಜತೆ ದೋಸ್ತಿ ಕುದುರಿಸಿ ಹೊಸ ಸರ್ಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. 2006ರಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾದರು.

2007ರಲ್ಲಿ 7 ದಿನದ ಮುಖ್ಯಮಂತ್ರಿ

ನವೆಂಬರ್ 12, 2007ರಂದು ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ‍ಪ್ರಮಾಣ ವಚನ ಸ್ವೀಕರಿಸಿದರು. ಜೆಡಿಎಸ್‌ ಬೆಂಬಲ ನೀಡದ ಕಾರಣ ವಿಶ್ವಾಸಮತ ಸಾಬೀತುಪಡಿಸಲು ಸಾದ್ಯವಾಗದೇ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾಯತು. ಈ ಪ್ರಸಂಗದಲ್ಲಿ ಕುಮಾರಸ್ವಾಮಿ ಅವರಿಗೆ ‘ವಚನಭ್ರಷ್ಟ’ ಹಣೆಪಟ್ಟಿ ಅಂಟಿಕೊಂಡಿತು. ಜೆಡಿಎಸ್ ‘ವಿಶ್ವಾಸ ದ್ರೋಹ’ವನ್ನೇ  ಯಡಿಯೂರಪ್ಪ ಚುನಾವಣೆ ವಿಷಯವಾಗಿಸಿದರು.

ಮತ್ತೆ ಒಲಿಯಿತು ಅಧಿಕಾರ

2008ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿ ದೊಡ್ಡಪಕ್ಷವಾಗಿ ಹೊರಹೊಮ್ಮಿತು. ಆರು ಪಕ್ಷೇತರ ಶಾಸಕರ ನೆರವಿನಿಂದ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ಸ್ವಂತ ಬಲದ ಮೇಲೆ ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಿ ಇತಿಹಾಸ ಬರೆಯಿತು. ಸರ್ಕಾರವನ್ನು ಭದ್ರಪಡಿಸಿಕೊಳ್ಳಬೇಕು ಎನ್ನುವ ಆಶಯದಲ್ಲಿ ಶುರು ಮಾಡಿದ ‘ಆಪರೇಷನ್ ಕಮಲ’ ಮುಂದಿನ ದಿನಗಳಲ್ಲಿ ಕೆಟ್ಟ ಪರಂಪರೆಗೆ ನಾಂದಿ ಹಾಡಿತು.

ಸಂಖ್ಯಾಬಲದಿಂದ ಸರ್ಕಾರ ಸುಭದ್ರವಾಗಿದ್ದರೂ ಆಂತರಿಕ ಭಿನ್ನಮತ ಯಡಿಯೂರಪ್ಪ ಅವರನ್ನು ಹೈರಾಣಾಗಿಸಿತ್ತು. ಪ್ರತಿಪಕ್ಷಗಳ ಹದ್ದಿನಕಣ್ಣು, ಬಿಡುಗಡೆಯಾಗುತ್ತಿದ್ದ ಸಾಲುಸಾಲು ಅವ್ಯವಹಾರದ ದಾಖಲೆಗಳನ್ನು ಎದುರಿಸಲು ಯಡಿಯೂರಪ್ಪ ಸಾಕಷ್ಟು ಬುದ್ಧಿವಂತಿಕೆ ವ್ಯಯಿಸಬೇಕಾಗಿ ಬಂತು. ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾದ ಕಾರಣ ಜುಲೈ 31, 2011ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ, ತಮ್ಮ ಆಪ್ತ ಡಿ.ವಿ.ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದರು. ಅವರು ಹಿಡಿತಕ್ಕೆ ಸಿಗುತ್ತಿಲ್ಲ ಎನಿಸಿದಾಗ ಪಟ್ಟು ಹಿಡಿದು ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದರು.

ಭ್ರಷ್ಟಾಚಾರ ಆರೋಪವುಳ್ಳ ಖಾಸಗಿ ದೂರಿಗೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಕ್ಟೋಬರ್ 15, 2011ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜೈಲಿಗೆ ಹೋದ ಮಾಜಿ ಮುಖ್ಯಮಂತ್ರಿ ಎನ್ನುವ ಅಪಕೀರ್ತಿಯೂ ಅವರಿಗೆ ಅಂಟಿಕೊಂಡಿತು.

ಕೆಜೆಪಿ ಸ್ಥಾಪನೆ

ತಮ್ಮ ಪಕ್ಷದಲ್ಲಿನ ಆಂತರಿಕ ಸಮಸ್ಯೆಗಳ ಕಾರಣಕ್ಕೆ ಅಧಿಕಾರ ಕಳೆದುಕೊಂಡ ಯಡಿಯೂರಪ್ಪ 2013ರಲ್ಲಿ ಕೆಜೆಪಿ ಕಟ್ಟಿ ಸಡ್ಡು ಹೊಡೆದರು. ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗದಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಮಾತ್ರ ಯಶಸ್ವಿಯಾದರು. ರಾಜ್ಯದಲ್ಲಿ ಪಕ್ಷಕ್ಕೆ ಯಡಿಯೂರಪ್ಪ ಅಗತ್ಯ ಎಂಬುದನ್ನು ಮನಗಂಡ ಬಿಜೆಪಿ, ಮತ್ತೆ ಹೋರಾಟಗಾರನಿಗೆ ಬಾಗಿಲು ತೆರೆಯಿತು. 2013ರಲ್ಲಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ಹೊಸದಾಗಿ ಬರೆದುಕೊಂಡರು.

ಹಗಲಿರುಳು ದುಡಿದು ಪಕ್ಷ ಸಂಘಟಿಸಿದ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ 2018ರ ವಿಧಾನಸಭೆ ಚುನಾವಣೆ ಎದುರಿಸಿತು. 104  ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಬಹುಮತಕ್ಕೆ 9 ಸ್ಥಾನಗಳ ಕೊರತೆ ಎದುರಾಯಿತು. ಈ ನಡುವೆಯೂ ಯಡಿಯೂರಪ್ಪ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ನಿರೀಕ್ಷೆಯಂತೆ ರಾಜ್ಯಪಾಲರು ಆಹ್ವಾನವನ್ನೂ ನೀಡಿ, ಬಹುಮತ ತೋರಿಸಲು 15 ದಿನ ಕಾಲಾವಕಾಶ ನೀಡಿದ್ದರು.

ಮರುದಿನ ‘ಬಿ.ಎಸ್. ಯಡಿಯೂರಪ್ಪ ಹೆಸರಿನ ನಾನು ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ’ ಎಂದು ಸಿಎಂ ಗದ್ದುಗೆ ಏರಿದರು. ಕಾಂಗ್ರೆಸ್‌–ಜೆಡಿಎಸ್‌ ಶಾಸಕರನ್ನು ಸೆಳೆದುಕೊಂಡು ವಿಶ್ವಾಸಮತ ಗೆಲ್ಲಬಹುದು ಎನ್ನುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿತ್ತು.

ಆದರೆ, ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್‌–ಜೆಡಿಎಸ್‌ ನಾಯಕರು ರಾತ್ರೋರಾತ್ರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಬಹುಮತ ಸಾಬೀತುಪಡಿಸಲು ರಾಜ್ಯ‍ಪಾಲರು ನೀಡಿದ್ದ 15 ದಿನಗಳ ಕಾಲಾವಕಾಶದ ಬದಲು ಶನಿವಾರ (ನ.19, 2018) ಸಂಜೆ 4 ಗಂಟೆಗೆ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ನಸುಕಿನಲ್ಲಿ (ನ.18) ಆದೇಶ ನೀಡಿತ್ತು.

ಕೋರ್ಟ್ ಆದೇಶದಂತೆ, ಶನಿವಾರ (ನ.19) ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಆರಂಭಗೊಂಡಿತು. ಹಂಗಾಮಿ ಸ್ಪೀಕರ್‌ ಕೆ.ಜಿ. ಬೋಪಯ್ಯ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ಸಂಜೆ 4 ಗಂಟೆಗೆ ‘ವಿಶ್ವಾಸ ಮತ’ ಸಾಬೀತುಪಡಿಸಲು ಕೋರ್ಟ್‌ ಸೂಚನೆ ನೀಡಿತ್ತಾದರೂ 3.40ಕ್ಕೆ ಈ ಪ್ರಸ್ತಾವ ಮಂಡಿಸಿದ ಯಡಿಯೂರಪ್ಪ, ಅದುಮಿಟ್ಟ ಆಕ್ರೋಶ, ತೋರಿಸಿಕೊಳ್ಳಲಾಗದ ದುಗುಡ, ಒತ್ತರಿಸಿ ಬರುತ್ತಿದ್ದ ಭಾವೋದ್ವೇಗದ ಮಧ್ಯೆ 22 ನಿಮಿಷಗಳ ವಿದಾಯದ ಭಾಷಣ ಮಾಡಿದರು.

‘ಪ್ರಸ್ತಾವ ವಾಪಸು ಪಡೆಯುತ್ತಿದ್ದೇನೆ’ ಎಂದು ಘೋಷಿಸಿ, ರಾಜ್ಯಪಾಲರಿಗೆ ರಾಜೀನಾಮೆ ನೀಡುವುದಾಗಿ ಸದನಕ್ಕೆ ತಿಳಿಸಿದರು. ಯಡಿಯೂರಪ್ಪ ನೇತೃತ್ವದ ಮೂರು ದಿನಗಳ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತದ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳದೆ ಪತನಗೊಂಡಿತು. ಅಷ್ಟೇ ಅಲ್ಲ, ರಾಷ್ಟ್ರಗೀತೆ ಮೊಳಗುವ ಮುನ್ನವೇ ಯಡಿಯೂರಪ್ಪ ಸದನದಿಂದ ಹೊರಟರು. ಮೂರನೇ ಬಾರಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದ ಅವರ ಅಧಿಕಾರಾವಧಿ ಕೇವಲ 55 ಗಂಟೆಯಲ್ಲಿ ಕೊನೆಗೊಂಡಿತು.

4ನೇ ಬಾರಿಗೆ ಸಿಎಂ ಗದ್ದುಗೆಗೆ ಬಿಎಸ್‌ವೈ

ಯಡಿಯೂರಪ್ಪ ಸರ್ಕಾರ ‘ವಿಶ್ವಾಸ’ಮತದ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳದೆ ಪತನಗೊಂಡ ಬಳಿಕ, ಕಾಂಗ್ರೆಸ್‌–ಜೆಡಿಎಸ್‌ನ ಮೈತ್ರಿ ಸರ್ಕಾರ ರಚೆನೆಯಾಗಿ, ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಮೈತ್ರಿ ಪಕ್ಷಗಳ ಆಂತರಿಕ ಭಿನ್ನಮತದ ಹೊಗೆ ಬೆಂಕಿಯಾಗಿ ಹೊತ್ತಿಕೊಂಡ ಪರಿಣಾಮ ಶಾಸಕರು ಗುಂಪುಗುಂಪಾಗಿ ರಾಜೀನಾಮೆ ಸಲ್ಲಿಸಿದರು. ಮುಂಗಾರು ಅಧಿವೇಶನದಲ್ಲಿ ವಿಶ್ವಾಸಮತ ಪ್ರಸ್ತಾವ ಮಂಡಿಸಿದ್ದ ಕುಮಾರಸ್ವಾಮಿ, ಇದೇ ಜುಲೈ 23ರಂದು ವಿಶ್ವಾಸಮತಕ್ಕೆ ಹಾಕಿದರು. ಪ್ರಸ್ತಾವದ ಪರ 99, ವಿರುದ್ಧ 105 ಮತಗಳು ಬಂದ ಕಾರಣ ಕುಮಾರಸ್ವಾಮಿ ನೇತೃತ್ವದ 14 ತಿಂಗಳ ಮೈತ್ರಿ ಸರ್ಕಾರ ಬಿದ್ದುಹೋಯಿತು. ಈ ಅವಧಿಯಲ್ಲಿ ಯಡಿಯೂರಪ್ಪ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಮೈತ್ರಿ ಸರ್ಕಾರದ ಪತನ ಬಳಿಕ ಸರ್ಕಾರ ರಚನೆ ಉಮೇದಿನಲ್ಲಿದ್ದ ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪಕ್ಷದ ಹೈಕಮಾಂಡ್‌ ಎರಡು ದಿನ ಗ್ರೀನ್ ಸಿಗ್ನಲ್‌ ನೀಡದೆ, ಕಾದು ನೋಡುವ ತಂತ್ರ ಅನುಸರಿಸಿತ್ತು. ಗುರುವಾರ ತಡರಾತ್ರಿ ಅಮಿತ್‌ ಶಾ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದ ಯಡಿಯೂರಪ್ಪ ಶುಕ್ರವಾರ ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಅವಕಾಶ ಕೊರಿದರು.

ಇದೇ ದಿನ (ಜುಲೈ 26) ಸಂಜೆ 6ಕ್ಕೆ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಅವಕಾಶ ಕೊಟ್ಟಿದ್ದರು. ಯಡಿಯೂರಪ್ಪನವರು ನಾಲ್ಕನೆಯ ಬಾರಿಗೆ ಹೀಗೆ ಮುಖ್ಯಮಂತ್ರಿಯಾದರು. ಇವತ್ತಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಭರ್ತಿ ಎರಡು ವರ್ಷಗಳು. ಇವತ್ತೇ ಅವರು ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರು ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ. ಇದೀಗ ಹೊಸ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಹೈಕಮಾಂಡ್ ಹೊಸ ಸಿಎಂ ನ ತಲಾಶ ದಲ್ಲಿ ನಿರತ. ತಮ್ಮ ರಾಜ್ಯದ ಹೊಸ ದೊರೆಯ ನಿರೀಕ್ಷೆಯಲ್ಲಿದೆ ಜನತೆ.

Leave A Reply

Your email address will not be published.