ಸಿ.ಎಂ.ಗಾದಿಗೆ ನಳಿನ್ ಕುಮಾರ್ ಹೆಸರು | ದೈವ ದೇವರ, ತಾಯಿಯ ಆಶೀರ್ವಾದ ಪಡೆದು ದೆಹಲಿಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ

Share the Article

ಯಡಿಯೂರಪ್ಪ ಅವರು ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆಯಾಗಬೇಕಿದೆ. ಈ ಹುದ್ದೆಗೆ ದ.ಕ.ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ನಾಡಿದ್ದು ಬುಧವಾರವೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಅವತ್ತೇ ನೂತನ ಮುಖ್ಯಮಂತ್ರಿಯ ಹೆಸರು ಬಹಿರಂಗ ಆಗಲಿದೆ. ಮುಂದಿನ ಮುಖ್ಯಮಂತ್ರಿ ನಳಿನ್ ಕುಮಾರ್ ಕಟೀಲ್ ಆಗಲಿದ್ದಾರೆಯಾ ಎಂಬ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣವೂ ಇಲ್ಲದೆ ಇಲ್ಲ.

ನಳಿನ್ ಕಟೀಲ್ ಅವರು ಆದಿತ್ಯವಾರ ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬಳಿಕ ಮಾಜಿ ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಅವರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಸಂಜೆ ವೇಳೆಗೆ ದಿಢೀರ್ ಆಗಿ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡು ಮನೆಗೆ ತೆರಳಿ ಕುಟುಂಬ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಳಿಕ ತಾಯಿ ಸುಶೀಲಾವತಿ ಎನ್.ಶೆಟ್ಟಿ ಕಾಲಿಗೆ ಬಿದ್ದು ಮುಟ್ಟಿ ನಮಸ್ಕರಿಸಿ ಆರ್ಶೀವಾದ ಪಡೆದುಕೊಂಡು, ತುರ್ತು ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.

ಯಡಿಯೂರಪ್ಪ ಅವರು ಸೋಮವಾರ ರಾಜೀನಾಮೆ ನೀಡಿದ ತರವಾಯ ನಳಿನ್ ಕುಮಾರ್ ಕಟೀಲ್​ ಅವರಿಗೆ ವರಿಷ್ಟರಿಂದ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದು, ಅದು ಇದೀಗ ಕುತೂಹಲ ಮೂಡಿಸಿರುವುದು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿರುವ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ನಳಿನ್ ಕಟೀಲ್ ಅವರ ಹೆಸರು ಮುಖ್ಯಮಂತ್ರಿ ಪದವಿಗೆ ಓರ್ವ ಅಭ್ಯರ್ಥಿ ಎಂಬ ಬಗ್ಗೆ ಪ್ರಸ್ತಾಪ ಬರುತ್ತಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್ ಕಟೀಲ್, ಹೈ ಕಮಾಂಡ್ ಕೃಪೆ ಇದ್ದರೆ ಮುಖ್ಯಮಂತ್ರಿ ಆದರೂ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಕರಾವಳಿಯಲ್ಲಿ ಹೊಸ ನಿರೀಕ್ಷೆಗಳು ಗರಿಗೆದರಿವೆ. ಅಲ್ಲಲ್ಲಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರುಗಳು ಸಾಮಾಜಿಕ ಜಾಲತಾಣದಲ್ಲಿ ‘ಭಾವಿ ಮುಖ್ಯಮಂತ್ರಿ ನಳಿನ್ ಕುಮಾರ್ ಕಟೀಲ್ ‘ ಎಂಬ ಬ್ಯಾನರ್ ಗಳು ಹರಿದಾಡುತ್ತಿವೆ. ಸಂಘಪರಿವಾರದ ಪ್ರಯೋಗಶಾಲೆ, ಯಾವತ್ತೂ ಬಿಜೆಪಿಯನ್ನು ಕೈಬಿಡದ ಕರಾವಳಿಗೆ ಮುಖ್ಯಮಂತ್ರಿಿ ಸ್ಥಾನ ಒಲಿದು ಬರುತ್ತದೆಯಾ ಎನ್ನುವುದು ಈ ಕ್ಷಣದ ಬಿಲಿಯನ್ ಡಾಲರ್ ಪ್ರಶ್ನೆ.

Leave A Reply

Your email address will not be published.