ಬೃಹತ್ ಗಾತ್ರದ ಹಲವು ಬಂಡೆಗಳು ಗುಡ್ಡದಿಂದ ಉರುಳಿ ಸೇತುವೆ ಮೇಲೆ ಬಿದ್ದ ಪರಿಣಾಮ ಟೆಂಪೋ ಸಹಿತ 9 ಜನ ನೀರು ಪಾಲು
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತದ ಕಾರಣ ಬೆಟ್ಟದಿಂದ ಬಂಡೆಕಲ್ಲುಗಳು ಉರುಳಿದ್ದು, ಒಂದು ಬೃಹತ್ ಕಲ್ಲು ಬಿದ್ದು ಬಸ್ಪಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಎರಡು ತುಂಡಾಗಿ 9 ಜನ ಪ್ರವಾಸಿಗರು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ರಾಜಸ್ಥಾನದ ಸಿಕಾರ್‌ನ ಮಾಯಾಲ್ ದೇವಿ ಬಿಯಾನಿ (55), ಅವರ ಪುತ್ರ ಅನುರಾಗ್ ಬಿಯಾನಿ (31) ಮತ್ತು ಮಗಳು ಮಾಯಾ ದೇವಿ ಬಿಯಾನಿ (25), ಮಹಾರಾಷ್ಟ್ರದ ಪ್ರತಿಭಾ ಸುನಿಲ್ ಪಾಟೀಲ್ (27), ಜೈಪುರದ ದೀಪ ಶರ್ಮಾ (34) ಅಮೋಘ್ ಬಾಪತ್ (27), ಛತ್ತೀಸ್‌ಗಡದ ಸತೀಶ್ ಕಟಕ್ಬರ್ (34), ಪಶ್ಚಿಮ ಬಂಗಾಳದ ಚಾಲಕ ಉಮ್ರಾವ್ ಸಿಂಗ್ (42) ಮತ್ತು ಕುಮಾರ್ ಉಲ್ಹಾಸ್ ವೇದಪಥಕ್ (37) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಟೆಂಪೋದಲ್ಲಿ ಛಿತ್ಕುಲ್ ದಿಂದ ಸಾಂಗ್ಲಾದತ್ತ ಹೊರಟಿದ್ದರು ಎಂದು ತಿಳಿದುಬಂದಿದೆ.
ಬೃಹತ್ ಕಲ್ಲು ಬಿದ್ದಾಗ ಟೆಂಪೋ ಸೇತುವೆ ಮೇಲಿಂದ ನದಿಯನ್ನು ದಾಟುತ್ತಿತ್ತು. ಬೃಹತ್ ಕಲ್ಲು ಬೀಳುತ್ತಿದ್ದಂತೆ ಟೆಂಪೋ ಸಹ ನದಿಗೆ ಬಿದ್ದಿದೆ. ನದಿಗೆ ಟೆಂಪೋ ಬೀಳುತ್ತಿದ್ದಂತೆ ಪ್ರವಾಸಿಗರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಜನರ ಕಿರುಚಾಟ ಕೇಳಿ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ರಕ್ಷಣೆಗೆ ಮುಂದಾಗಿ, ಕೆಲವರನ್ನು ನದಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಮೃತ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡುವದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಮೃತರಲ್ಲಿ ಒಬ್ಬಳಾದ ದೀಪ ಶರ್ಮ ಟ್ವಿಟರ್ ನಲ್ಲಿ ಆ ಪ್ರದೇಶದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದರು. ಪೋಸ್ಟ್ ಹಾಕಿದ ಕೆಲವೇ ಕ್ಷಣಗಳಲ್ಲಿ ಅವರು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ಬೆಟ್ಟದ ಮೇಲಿಂದ ಬೃಹತ್ ಬಂಡೆ ಸೇತುವೆ ಮೇಳೆ ಭಯಾನಕ ದೃಶ್ಯವನ್ನು ಕಟ್ಟಡವೊಂದರಿಂದ ಯಾರೋ ಸೆರೆಹಿಡಿದಿದ್ದಾರೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.