ಇಂದಿನಿಂದ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಸೇವೆಗಳಿಗೆ ಅನುಮತಿ
ಕೊರೊನಾ ಎರಡನೇ ಅಲೆ ಪರಿಣಾಮ ಎರಡು ತಿಂಗಳುಗಳಿಂದ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದ್ದ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸಹಿತ ಎಲ್ಲ ಧಾರ್ಮಿಕ ಸ್ಥಳಗಳು ರವಿವಾರದಿಂದ ಭಕ್ತರಿಗೆ ಮುಕ್ತವಾಗಲಿವೆ.
ಈ ಸಂಬಂಧ ಶನಿವಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಪತ್ತು ನಿರ್ವಹಣ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಎನ್. ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಸಿಮೀತಗೊಳಿಸಿ ಜು. 3ರಂದು ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ ಹೊಸದಾಗಿ ಹೊರಡಿಸಲಾಗಿದೆ.
ರಾಜ್ಯಾದ್ಯಂತ ಮಂದಿರ, ಮಸೀದಿ, ಚರ್ಚ್, ಗುರುದ್ವಾರಗಳ ಸಹಿತ ಎಲ್ಲ ಬಗೆಯ ಧಾರ್ಮಿಕ ಸ್ಥಳಗಳಲ್ಲಿ ಸಂಬಂಧಿಸಿದ ಧಾರ್ಮಿಕ ಚಟುವಟಿಕೆಗಳು, ಪೂಜೆ, ಅರ್ಚನೆ, ಸೇವೆ ಮತ್ತು ಪ್ರಾರ್ಥನೆಗಳಿಗೆ ರವಿವಾರ (ಜು. 25)ದಿಂದ ತೆರೆಯಲು ಅನುಮತಿ ನೀಡಲಾಗಿದೆ. ಈ ವೇಳೆ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಜಾತ್ರೆ, ದೇವಸ್ಥಾನ ಉತ್ಸವ, ಮೆರವಣಿಗೆ, ಸಭೆ-ಸಮಾರಂಭಗಳಿಗೆ ಅನುಮತಿ ಇರುವುದಿಲ್ಲ ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.