ನಳಿನ್ ಕಟೀಲ್ ಆಡಿಯೋ ವೈರಲ್ ಆದ ಕಾರಣ ಈ ಸಮಾವೇಶ | ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ಹೊಕ್ಕಂತೆ ಎಂದು ಸಿಎಂ ವಿರೋಧಿಗಳನ್ನು ಹಾವಿಗೆ ಹೋಲಿಸಿ ಟೀಕಿಸಿದ ದಿಂಗಾಲೇಶ್ವರ ಶ್ರೀ
ಬೆಂಗಳೂರು, ಜುಲೈ 25: ನಾಯಕತ್ವ ಬದಲಾವಣೆ ವಿಚಾರವಾಗಿ ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ತುಣುಕು ಹರಿದಾಡಿದ ಪರಿಣಾಮವಾಗಿ ಈ ಸಮಾವೇಶ ಸೃಷ್ಟಿಯಾಗಿದೆ. ಯಾರ ಸಲಹೆ, ಪ್ರಚೋದನೆ, ಒತ್ತಡಕ್ಕೆ ಮಣಿದು ಈ ಸಮಾವೇಶ ಮಾಡುತ್ತಿಲ್ಲ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಇಂದು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ “ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ” ವಿಷಯದ ಮಠಾಧೀಶರ ಮಹಾ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಠಾಧೀಶರು ಇದೇ ಮೊದಲ ಬಾರಿಗೆ ಬೆಂಬಲಿಸಿಲ್ಲ. ಈ ಹಿಂದೆ ಯಡಿಯೂರಪ್ಪ ಅವರಿಗೆ ಅನ್ಯಾಯ ಆಗುತ್ತಿದೆ ಎಂಬ ಮಾತು ಕೇಳಿ ಬಂದಾಗ ಸ್ವತಃ ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ್ ಸ್ವಾಮೀಜಿಗಳು ಬಹಿರಂಗ ಬೆಂಬಲಕ್ಕೆ ನಿಂತಿದ್ದರು. ಈಗ ನಾಡಿನ ಎಲ್ಲಾ ಮಠಾಧೀಶರು ಬೆಂಬಲಿಸುತ್ತಿದ್ದಾರೆ ಎಂದು ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡರು.
ಸ್ವಪಕ್ಷದ ವಿರೋಧಿಗಳನ್ನು ಹೈಕಮಾಂಡ್ ನಿಯಂತ್ರಿಸಿಲ್ಲ ಎಂಬ ಕಾರಣಕ್ಕೆ ಮಠಾಧೀಶರಿಗೆ ನೋವಾಗಿದೆ. ಪಕ್ಷ ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕು. ಅಧಿಕಾರ ನಡೆಸಲು ನಾನು-ನೀವು ಎಂದು ಬೇರೆಯವರು ಮುಂದೆ ಬರುತ್ತಾರೆ. ಇದು ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ಹೊಕ್ಕಂತೆ ಆಗುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿಗಳು ಟೀಕಿಸಿದರು.