ಬೀಟ್ ಹೊಡೆಯುವ ಹೊಯ್ಸಳ ವಾಹನದ ಹಿಂಬಾಲಿಸಿ ಇನ್ನೊಬ್ಬ ಬೀಟ್ ಹೊಡೆಯಲಿದ್ದಾನೆ, ಯಾರವನು ಗೊತ್ತಾ ?!
ಕರ್ತವ್ಯ ನಿರತರಾಗಿದ್ದ ವೇಳೆ ಕೆಲ ಹೊಯ್ಸಳ ಪೊಲೀಸರು ಸುಖಾಸುಮ್ಮನೆ ಒಂದೇ ಕಡೆ ವಾಹನ ನಿಲ್ಲಿಸಿಕೊಂಡು ಕಾಲಹರಣ ಮಾಡುತ್ತಿರುವ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹೊಯ್ಸಳ ಪೊಲೀಸರ ಕಾರ್ಯವೈಖರಿಗೆ ಚುರುಕು ಮುಟ್ಟಿಸುವ ಸಲುವಾಗಿ, ಒಂದಷ್ಟು ಬದಲಾವಣೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ.
ಇನ್ನು ಮುಂದೆ, ಎಲ್ಲೋ ಒಂದು ಮರದ ಕೆಳಗೆ ತಂಪು ಜಾಗದಲ್ಲಿ ವಾಹನ ನಿಲ್ಲಿಸಿ, ಒಂದು ಸಣ್ಣ ರೆಸ್ಟ್, ಪುಟ್ಟ ತೂಕಡಿಕೆ ಮಾಡುತ್ತೇನೆಂದು ಹೊಯ್ಸಳ ಪೋಲಿಸ್ ರು ಗಾಡಿ ನಿಲ್ಲಿಸಿದರೆ, ಗಾಡಿಯಲ್ಲಿ ಅಳವಡಿಸಿದ ಸಾಫ್ಟ್ವೇರ್ ಮೂಲಕ ‘ ಹೊಯ್, ಹೊಯ್ ‘ ಎಂದು ಕಮಾಂಡೆಂಟ್ ಸೆಂಟರ್ ನಿಂದ ಬೀಟ್ ನಲ್ಲಿರುವ ಹೊಯ್ಸಳ ಪೊಲೀಸರನ್ನು ಎಚ್ಚರಿಸಲಿದೆ.
ಅಪರಾಧ ಚಟುವಟಿಕೆ ನಡೆಯದಂತೆ, ಒಂದುವೇಳೆ ನಡೆದರೂ ತಕ್ಷಣ ಹಾಜರಾಗಿ ಸೂಕ್ತ ಕ್ರಮಕೈಗೊಳ್ಳಲು ನಿಯೋಜಿಸಲಾಗಿರುವ ಹೊಯ್ಸಳ-ಚೀತಾಗಳಿಗಾಗಿಯೇ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಾಗುತ್ತಿದೆ.
ಸದ್ಯ ಸಾರ್ವಜನಿಕರಿಂದ ದೂರುಗಳು ಬಂದಾಗ ಮಾತ್ರ ಹೊಯ್ಸಳ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದೆ. ಈ ನಡುವೆ ಸರಗಳ್ಳತನ, ಸುಲಿಗೆ, ದರೋಡೆಯಂತಹ ಪ್ರಕರಣ ತಪ್ಪಿಸಲು ಹೊಯ್ಸಳ ಹಾಗೆ ಚೀತಾ ವಾಹನ ಸಿಬ್ಬಂದಿಗಳು ಎಲ್ಲ ಪ್ರದೇಶಗಳಲ್ಲೂ ಕಣ್ಣಾವಲಿಡಲು ನಗರ ಪೊಲೀಸ್ ಆಯ ಕಮಲ್ ಪಂತ್ ಹೊಸ ವ್ಯವಸ್ಥೆ ರೂಪಿಸಲು ಮುಂದಾಗಿದ್ದಾರೆ.
ಈ ಮೊದಲು ಅಯಾಯ ಪೊಲೀಸ್ ಠಾಣೆಯಿಂದಲೇ ಹೊಯ್ಸಳ ಬೀಟ್ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಸದ್ಯ ಕಮಿಷನರ್ ಕಚೇರಿಯ ಕಮಾಂಡೆಂಟ್ ಸೆಂಟರ್ ನಿಂದ ಹೊಯ್ಸಳ ಪೊಲೀಸರ ಕೆಲಸದ ಬಗ್ಗೆ ನಿಗಾ ಇಡಲಾಗುತ್ತಿದೆ. ಜಿಪಿಎಸ್ ಮೂಲಕ ಬೀಟ್ ನಲ್ಲಿರುವ ಯಾವ ಹೊಯ್ಸಳ ವಾಹನ, ಚೀತಾ ಬೈಕ್ ಎಲ್ಲಿದೆ ಅನ್ನೋದನ್ನು ತಿಳಿಯಲಾಗುತ್ತಿತ್ತು.
ಇಲ್ಲೂ ಕೂಡ ಕೆಲ ಪೊಲೀಸರು, ಸುಖಾಸುಮ್ಮನೆ ವಾಹನ ನಿಲ್ಲಿಸಿಕೊಂಡು ಕಾಲಹರಣ ಮಾಡ್ತಿದ್ದಾರೆ ಹಾಗೂ ಸರಿಯಾಗಿ ಬೀಟ್ ಮಾಡ್ತಿಲ್ಲ. ಹಾಗಾಗಿ ಅಪರಾಧ ಚಟುವಟಿಕೆಗಳು ಹೆಚ್ಚಾಗ್ತಿವೆ ಅನ್ನೋ ಆರೋಪಗಳು ಕೇಳಿಬಂದಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಹೊಯ್ಸಳ ಮತ್ತು ಚೀತಾ ವಾಹನಗಳ ಕಾರ್ಯಕ್ಷಮತೆ ಹೆಚ್ಚಿಸಿರುವ ನಿಟ್ಟಿನಲ್ಲಿ ಕಮಾಂಡೆಂಟ್ ಸೆಂಟರ್ ನಿಂದ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಹತ್ತು ನಿಮಿಷಕ್ಕಿಂತ ಒಂದು ಜಾಗದಲ್ಲಿ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಕರ್ತವ್ಯದಲ್ಲಿದ್ದ ವೇಳೆ ಅಪರಾಧ ಚಟುವಟಿಕೆಗಳು ನಡೆದರೆ, ಆ ಭಾಗದಲ್ಲಿ ಬೀಟ್ ನಲ್ಲಿರುವ ಪೊಲೀಸರನ್ನೇ ಹೊಣೆ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಒಟ್ಟು 272 ಹೊಯ್ಸಳ ವಾಹನಗಳು, 232
ಚೀತಾ ಬೈಕ್‌ಗಳು ಗಸ್ತು ತಿರುಗುತ್ತಿವೆ. ಹೊಯ್ಸಳ ಬೀಟ್
ವ್ಯವಸ್ಥೆ ಸಂಬಂಧ ಇಷ್ಟು ವರ್ಷಗಳ ಕಾಲ ಆಯಾ
ಪೊಲೀಸ್ ಠಾಣಾಧಿಕಾರಿಗಳೇ ನಿಯಂತ್ರಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ನಿಂದಲೇ ನಿಗಾ ವಹಿಸಲಾಗುತ್ತದೆ.
ಗಸ್ತಿನಲ್ಲಿರುವ ಸಿಬ್ಬಂದಿ ಕಾರ್ಯನಿರ್ವಹಣೆ ಬಗ್ಗೆ ಪ್ರತಿದಿನ ವರದಿ ನೀಡುವ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಾಗುತ್ತಿದೆ. ಹೊಯ್ಸಳದಲ್ಲಿ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದ್ದು, ಭೌಗೋಳಿಕ ಪ್ರದೇಶಗಳ ಆಧಾರದ ಮೇರೆಗೆ ಆಯಾ ಠಾಣೆಯ ಸರಹದ್ದು ಗುರುತಿಸುವ ಹಾಗೆ ಜಿಯೋ ಫೆನ್ಸಿಂಗ್ ಮಾಡಿ ಸಾಫ್ಟ್‌ವೇರ್‌ನಲ್ಲಿ ಅಳವಡಿಸು ಕೆಲಸ ನಡೆಯುತ್ತಿದೆ. ಇದರಿಂದ ಹೊಯ್ಸಳ ಪೊಲೀಸರಿಗೆ ಗಸ್ತು ತಿರುಗಲು ಅನುಕೂಲವಾಗಲಿದೆ.