ಭಾರಿ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಭೂಕುಸಿತ
ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ಇಂದು ಭೂಕುಸಿತ ಉಂಟಾಗಿ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಬಳಿ ರಸ್ತೆ ಕುಸಿದಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿರಂತರ ಮಳೆಯಿಂದಾಗಿ ರಸ್ತೆ ಕುಸಿತ ಉಂಟಾಗಿದೆ. ಸದ್ಯ ಈ ಮಾರ್ಗದಲ್ಲಿ ಘನ ವಾಹನ ಸಂಚಾರ ಬಂದ್ ಆಗಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗದ ಮೊರೆ ಹೋಗಿದ್ದಾರೆ.
ಶಿರಾಡಿ ಘಾಟ್ ಬದಲು ಬೆಂಗಳೂರು-ಮಂಗಳೂರು ಬದಲಿ ಮಾರ್ಗವಾಗಿ ಬೇಲೂರು ಮೂಡಿಗೆರೆ ಚಾರ್ಮಾಡಿ ಘಾಟ್ ರಸ್ತೆಯನ್ನು ಸೂಚಿಸಲಾಗಿದೆ. ಇದೀಗ ಘಟನಾ ಸ್ಥಳದಲ್ಲಿ ರಸ್ತೆ ಸರಿಪಡಿಸುವ ಕಾರ್ಯಾಚರಣೆ ಆರಂಭಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿ ಮಾಡುವವರು ಸಕಲೇಶಪುರ ದೋಣಿಗಾಲ್ ಬಳಿ ಅವೈಜ್ಞಾನಿಕವಾಗಿ ಮಣ್ಣು ಸುರಿದು ಕಾಮಗಾರಿ ಮಾಡುತ್ತಿರುವುದೇ ರಸ್ತೆ ಕುಸಿಯಲು ಕಾರಣ ಎಂದು ಈ ಹಿಂದೆ ಪ್ರದೇಶದ ಜನ ಆತಂಕ ವ್ಯಕ್ತಪಡಿಸಿದ್ದರು. ಮೊದಲೇ ಎಚ್ಚೆತ್ತುಕೊಂಡಿದ್ದರೆ ರಸ್ತೆ ಇಷ್ಟರ ಮಟ್ಟಿಗೆ ಕುಸಿಯೋದನ್ನು ತಪ್ಪಿಸಬಹುದಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯವರ ದಿವ್ಯ ನಿರ್ಲಕ್ಷ್ಯದಿಂದ ಈಗ ಶಿರಾಡಿ ಘಾಟ್ ರಸ್ತೆಯೇ ಬಂದ್ ಆಗುವ ಪರಿಸ್ಥಿತಿ ಬಂದಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-75 ಶಿರಾಡಿ ಘಾಟ್ ಸಂಚಾರವನ್ನು ನಾಲ್ಕು ದಿನಗಳ ಕಾಲ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.