ತೃತೀಯ ಲಿಂಗಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ | ಕ್ರಾಂತಿಕಾರಿ ಹೆಜ್ಜೆಯಿಟ್ಟ ಕರ್ನಾಟಕ ಸರ್ಕಾರ
ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಶೇ. 1 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದ್ದು, ಈ ಮೂಲಕ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.
ಮೀಸಲಾತಿಗಾಗಿ 1977 ರ ಕರ್ನಾಟಕ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ಪೀಠಕ್ಕೆ ತಿಳಿಸಲಾಗಿತ್ತು. ಸಾಮಾನ್ಯ ಮೆರಿಟ್, ಎಸ್ಸಿ, ಎಸ್ಟಿ ಮತ್ತು ಪ್ರತಿ ಒಬಿಸಿ ವಿಭಾಗಗಳಲ್ಲಿ ತೃತೀಯ ಲಿಂಗಿಗಳಿಗೆ ಈ ಮೀಸಲಾತಿ ಅನ್ವಯಿಸುತ್ತದೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಉದ್ಯೋಗದಲ್ಲಿ ಲೈಂಗಿಕ ಅಲ್ಪ ಸಂಖ್ಯಾತ ವ್ಯಕ್ತಿಗಳಿಗೆ ಸಮತಲ ಮೀಸಲಾತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು. ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡುವಂತೆ ಶಿಫಾರಸು ಮಾಡುವ ವರದಿಯನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ (NCBC) ಸಲ್ಲಿಸಿದೆ ಮತ್ತು ಅದರ ಪ್ರಕಾರ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಹಾಜರಾದ ವಕೀಲರಿಂದ ವಿಭಾಗೀಯ ಪೀಠಕ್ಕೆ ಹೇಳಲಾಗಿತ್ತು.
ಕರ್ನಾಟಕ ನಾಗರಿಕ ಸೇವೆಗಳ ನೇಮಕಾತಿ ತಿದ್ದುಪಡಿ (ನಿಯಮಗಳು), 2021 ರಲ್ಲಿ ಕರ್ನಾಟಕ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ (ನಿಯಮಗಳು), 1977 ರಲ್ಲಿ ರಾಜ್ಯ ಸರ್ಕಾರವು ಮಾಡಿದ ತಿದ್ದುಪಡಿಗಳನ್ನು ನಾವು ಉಪ ನಿಯಮ 1 (ಡಿ) ಅನ್ನು ನಿಯಮದಲ್ಲಿ ಸೇರಿಸುವ ಮೂಲಕ ಪರಿಶೀಲಿಸಲಾಗಿದೆ. ಷರತ್ತು 1ಡಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ. 1 ಸಮತಲ ಮೀಸಲಾತಿ ನೀಡುತ್ತದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಮಧ್ಯವರ್ತಿಯ ಪರ ಹಾಜರಾದ ಹಿರಿಯ ವಕೀಲ ಜಯ್ನಾ ಕೊಠಾರಿ, ತೃತೀಯ ಲಿಂಗಿಗಳ ಸಂಘವಾದ ಜೀವ (Jeeva), ರಾಜ್ಯದ ಇತರ ಸಾರ್ವಜನಿಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಅರ್ಜಿ ಸಲ್ಲಿಸಲಾಗುವುದು. ಇದರಿಂದಾಗಿ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ನಿರ್ದೇಶನಗಳನ್ನು ನೀಡಬಹುದು ಎಂದು ಹೈಕೋರ್ಟ್ಗೆ ತಿಳಿಸಿದರು.
ಇನ್ನೊಂದೆಡೆ, ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ, ”ಟ್ರಾನ್ಸ್ಜೆಂಡರ್ಗಳಿಗೆ ಜಾರಿಗೊಳಿಸಿದ ಮತ್ತು ಮೀಸಲಾತಿ ನೀಡಿದ ದೇಶದ ಮೊದಲ ರಾಜ್ಯ ಇದು. ನಿಜವಾಗಿಯೂ ಬಹಳ ಮುಖ್ಯವಾದ ಬೆಳವಣಿಗೆ. ನನ್ನ ಸ್ನೇಹಿತ ವಿಜಯಕುಮಾರ್ ಪಾಟೀಲ್, ಇದನ್ನು ಜಾರಿಗೊಳಿಸುವಂತೆ ಮಾಡಲು ಬಹಳ ಕಷ್ಟಪಟ್ಟಿದ್ದಾರೆ. ಈ ಬಗ್ಗೆ ಮನವಿ ಮಾಡಿದ್ದಕ್ಕಾಗಿ ನಾವು ನನ್ನ ಸ್ನೇಹಿತನನ್ನು ಅಭಿನಂದಿಸಬೇಕಾಗಿದೆ.” ಎಂದು ಕೊಠಾರಿ ಹೇಳಿದರು.
ಕೊಠಾರಿಯ ಈ ಅಭಿನಂದನೆಗೆ ಪ್ರತಿಕ್ರಿಯೆ ನೀಡಿದ ವಿಜಯಕುಮಾರ್ ಪಾಟೀಲ್, ” ಈ ನ್ಯಾಯಾಲಯದ ನಿರ್ದೇಶನಗಳಿಂದಾಗಿ ಇದೆಲ್ಲವೂ ಸಾಧ್ಯವಾಯಿತು” ಎಂದು ಉತ್ತರ ನೀಡಿದ್ದಾರೆ.