ರೈಲ್ವೇ ಹಳಿ ದಾಟುವಾಗ ರೈಲಿನಡಿ ಸಿಲುಕಿಕೊಂಡ ವೃದ್ಧ | ರೈಲ್ವೇ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು
ಮುಂಬೈ: ಆಯಸ್ಸು ಗಟ್ಟಿಯಾಗಿದ್ದರೆ ಎಂಥಹ ಭೀಕರ ಸಾವು ಕೂಡ ಹತ್ತಿರ ಬಂದು ವಾಪಸ್ ಹೋಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ರೈಲ್ವೆ ಹಳಿ ದಾಟುವ ವೇಳೆ ಆಯತಪ್ಪಿ ಬಿದ್ದು ರೈಲಿಗೆ ಸಿಲುಕಿಕೊಳ್ಳುತ್ತಿದ್ದ ವೃದ್ಧನೊಬ್ಬ ಕೂದಲೆಳೆ ಅಂತರದಿಂದ ಪಾರಾಗಿ ಬಂದಿರುವ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರ ಮೈ ಝುಂ ಎನ್ನಿಸುವಂತಿದೆ.
ಮುಂಬೈನ ಕಲ್ಯಾಣ ಪ್ರದೇಶದಲ್ಲಿರುವ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್ ನಂ.4ರಲ್ಲಿ ನಿನ್ನೆ ಮಧ್ಯಾಹ್ನ 12.45ಕ್ಕೆ ಈ ಘಟನೆ ನಡೆದಿದೆ. ಹರಿ ಶಂಕರ್ ಎಂಬ 70 ವರ್ಷದ ವೃದ್ಧರೊಬ್ಬರು ರೈಲ್ವೆ ಹಳಿ ದಾಟುವ ವೇಳೆ ರೈಲಿನಡಿಗೆ ಸಿಲುಕಿಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಚೀಫ್ ಪರ್ಮನೆಂಟ್ ವೇ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್, ಲೋಕೊ ಪೈಲಟ್ ಎಸ್.ಕೆ ಪ್ರಧಾನ್ ಮತ್ತು ಸಹಾಯಕ ಲೋಕೊ ಪೈಲಟ್ ರವಿಶಂಕರ್‌ಗೆ ಕೂಗಿ ಹೇಳುವ ಮೂಲಕ ಎಚ್ಚರಿಸಿದ್ದಾರೆ. ಆಗ ಇಬ್ಬರು ಪೈಲಟ್‌ಗಳು ತಕ್ಷಣ ಬ್ರೇಕ್ ಹಾಕಿದ್ದಾರೆ. ನಂತರ ರೈಲಿನ ಕೆಳಗೆ ಸಿಲುಕಿಕೊಂಡಿದ್ದ ವೃದ್ಧನನ್ನು ಹೊರ ಎಳೆದಿದ್ದಾರೆ. ನಂತರ ರೈಲು ಬರುತ್ತಿರುವ ವೇಳೆ ರೈಲ್ವೆ ಹಳಿಯನ್ನು ದಾಟಬಾರದು ಎಂದು ವೃದ್ಧನಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಸಾಧಾರಣವಾಗಿ ರೈಲಿಗೆ ಬ್ರೇಕ್ ಹಾಕಿದರೆ ಅದು ಬಹುದೂರವರೆಗೆ ಹೋಗಿ ನಿಲ್ಲುತ್ತದೆ. ಇಲ್ಲಿ ವೃದ್ಧನ ಆಯಸ್ಸು ಗಟ್ಟಿ ಇತ್ತೆಂದು ಕಾಣಿಸುತ್ತದೆ. ರೈಲು ವೃದ್ಧನನ್ನು ತಲುಪುವ ಮೊದಲೇ ವಿಷಯ ತಿಳಿದ ತಕ್ಷಣ ಬ್ರೇಕ್ ಹಾಕಿದ್ದರಿಂದ ರೈಲಿನ ಅಡಿ ವೃದ್ಧ ಸಿಲುಕಿದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹರಿಶಂಕರ್ ಅವರ ಜೀವವನ್ನು ರಕ್ಷಿಸಿದ ಕಾರ್ಯವನ್ನು ಮೆಚ್ಚಿ ಕೇಂದ್ರ ರೈಲ್ವೆಯ ಜನರಲ್ ಮ್ಯಾನೇಜರ್ ಅಲೋ ಕನ್ಸಾಲ್ ಇಬ್ಬರು ಲೋಕೊ ಪೈಲಟ್‌ಗಳಿಗೆ ಹಾಗೂ ಸಿಪಿಡಬ್ಲೂಐಗೆ ತಲಾ ಎರಡು ಸಾವಿರ ರೂಪಾಯಿಗಳ ನಗದನ್ನು ಬಹುಮಾನವಾಗಿ ಘೋಷಿಸಿದ್ದಾರೆ.