ಮೊಬೈಲ್ ಕಳ್ಳತನವಾದರೆ,ಕಳೆದು ಹೋದರೆ ಈ ರೀತಿ ಮಾಡಿದರೆ ನೀವೂ ಸೇಫ್,ಹಣವೂ ಸೇಫ್!!
ಮೊಬೈಲ್ ಫೋನ್ ಕಳ್ಳತನ ಮಾಡಿ ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ಅತಿ ದೊಡ್ಡ ಕಳ್ಳ ವ್ಯವಹಾರವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಳ್ಳರು ಕೇವಲ ನಿಮ್ಮ ಫೋನ್ ಕದ್ದು ಅದನ್ನು ಮಾರಾಟ ಮಾಡಿ ಹಣ ಸಂಪಾದಿಸುವುದು ಮಾತ್ರವಲ್ಲದೆ, ಅದಕ್ಕಿಂತಲೂ ಹೆಚ್ಚಿನ ಉದ್ದೇಶವನ್ನಿಟ್ಟುಕೊಂಡಿದ್ದಾರೆ.
ಹೌದು, ಏಕೆಂದರೆ ಈಗ ನಿಮ್ಮ ಫೋನೇ ನಿಮ್ಮ ಬ್ಯಾಂಕ್ ಆಗಿದೆ. ಒಂದೋ ಎರಡೋ ಯುಪಿಐ ಐಡಿಗಳು, ಆನ್ಲೈನ್ ವ್ಯಾಲೆಟ್ಟುಗಳು ಹೀಗೆ ಸಕಲ ಹಣಕಾಸು ವ್ಯವಹಾರದ ಕೀಲಿ ಕೈ ನಿಮ್ಮ ಫೋನಲ್ಲಿಯೇ ಇದೆ. ಈಗ ಕಳ್ಳರಿಗೂ ಬೇಕಾಗಿರುವುದು ಇದೇ ಮಾಹಿತಿ.
ಒಂದು ವರದಿಯ ಪ್ರಕಾರ ಬ್ರೆಜಿಲ್ ನ ಸಾವೊ ಪಾವ್ಲೊ ಎಂಬಲ್ಲಿ ಕಳ್ಳರು ಆ್ಯಪಲ್ ಫೋನುಗಳನ್ನು ಸಿಕ್ಕಾಪಟ್ಟೆ ಕದಿಯುತ್ತಾರಂತೆ. ಆದರೆ ಅದನ್ನೆಲ್ಲಾ ಅವರು ಯಾರಿಗೂ ಮರು ಮಾರಾಟ ಮಾಡೋದಿಲ್ವಂತೆ. ಅವರಿಗೆ ಬೇಕಿರೋದು ಈ ಫೋನುಗಳಲ್ಲಿರುವ ಗ್ರಾಹಕರ ಬ್ಯಾಂಕಿಂಗ್ ಡಿಟೇಲ್ಸ್ ಮಾತ್ರ! ಇಷ್ಟು ಸಿಕ್ಕರೆ ಸಾಕು.ಇಡೀ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಕ್ಷಣಾರ್ಧದಲ್ಲಿ ಮಂಗಮಾಯ ಮಾಡುತ್ತಾರಂತೆ ಆ ಕಳ್ಳರು!
ಇದೆಲ್ಲ ನೋಡಿದ ಎಂಥವರಿಗಾದರೂ ಒಂದು ಕ್ಷಣ ದಿಗಿಲು ಉಂಟಾಗುತ್ತದೆ. ಒಂದೊಮ್ಮೆ ಫೋನ್ ಕಳೆದು ಹೋದರೆ ಏನು ಮಾಡುವುದು ಎಂಬ ಚಿಂತೆ ಕಾಡುವುದು ಸಹಜ. ಅಂಥ ಸಮಯದಲ್ಲಿ ಏನು ಮಾಡಿದರೆ ಆದಷ್ಟು ಸುರಕ್ಷಿತವಾಗಿರಬಹುದು ಎಂಬ ಟಿಪ್ಸ್ ಇಲ್ಲಿವೆ ನೋಡಿ.
ಫೋನ್ ಕಳೆದು ಹೋದಾಗ ಅದರಲ್ಲಿರುವ ಸಿಮ್ ಕಾರ್ಡ್ ದುರ್ಬಳಕೆ ಆಗದಂತೆ ತಡೆಗಟ್ಟುವುದೇ ಪ್ರಥಮ ಕೆಲಸವಾಗಬೇಕು. ಹೀಗಾಗಿ ಮೊಟ್ಟ ಮೊದಲಿಗೆ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಬೇಕು. ಸಿಮ್ ಬ್ಲಾಕ್ ಮಾಡಿದಲ್ಲಿ ಫೋನಿನಲ್ಲಿರುವ ಓಟಿಪಿ ಆಧರಿಸಿ ಕೆಲಸ ಮಾಡುವ ಎಲ್ಲ ಆ್ಯಪ್ ಗಳನ್ನು ಸಹ ಬ್ಲಾಕ್ ಮಾಡಿದಂತಾಗುತ್ತದೆ. ಒಂದು ಬಾರಿ ಸಿಮ್ ಬ್ಲಾಕ್ ಮಾಡಿಸಿದ ನಂತರ ನೀವು ಕೆಲ ಸಮಯ ಬಿಟ್ಟು ಅದೇ ನಂಬರಿನ ಸಿಮ್ ಅನ್ನು ಪುನಃ ಪಡೆದುಕೊಳ್ಳಬಹುದು. ಆದರೆ, ಈ ಅವಧಿಯಲ್ಲಿ ನಿಮ್ಮ ಬ್ಯಾಂಕಿಂಗ್ ಮಾಹಿತಿ, ವ್ಯಾಲೆಟ್ ಮುಂತಾದುವು ಸೇಫ್ ಆಗಿರುತ್ತವೆ ಎಂಬುದೇ ಮುಖ್ಯ.
ಫೋನಿನಲ್ಲಿ ಎಲ್ಲ ಬ್ಯಾಂಕಿಂಗ್ ಸೇವೆಗಳು ಬೆರಳ ತುದಿಯಲ್ಲೇ ಲಭ್ಯವಿರುತ್ತವೆ. ನಿಮ್ಮ ಸಿಮ್ ಕಾರ್ಡ್ ಹಾಗೂ ಮೊಬೈಲ್ ಆ್ಯಪ್ ಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿರುತ್ತವೆ. ಹೀಗಾಗಿ ಆದಷ್ಟು ಬೇಗನೆ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಸಹ ಬ್ಲಾಕ್ ಮಾಡುವುದು ಸೂಕ್ತ.
ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಂದ್ ಮಾಡಿದರೂ ಯುಪಿಐ ಸೇವೆಗಳ ಮೂಲಕ ಕಳ್ಳರು ನಿಮ್ಮ ಹಣ ಎಗರಿಸಲು ನೋಡಬಹುದು. ಆದ್ದರಿಂದ ಒಂದು ಕ್ಷಣವೂ ತಡಮಾಡದೆ ನಿಮ್ಮ ಎಲ್ಲ ಯುಪಿಐ ಐಡಿಗಳನ್ನು ಬ್ಲಾಕ್ ಮಾಡಿಸಿ.
ನಿಮ್ಮ ಫೋನಿನಲ್ಲಿರುವ ಪೇಟಿಎಂ, ಗೂಗಲ್ ಪೇ ಮುಂತಾದುವುಗಳ ವ್ಯಾಲೆಟ್ಟುಗಳಲ್ಲಿ ನೀವು ಸಾಕಷ್ಟು ಹಣ ತುಂಬಿಸಿಟ್ಟಿರಬಹುದು. ಕಳ್ಳರಿಗೆ ಈ ಹಣ ಸಿಗದಂತೆ ಮಾಡಲು ಬೇಗನೆ ಆನ್ಲೈನ್ ಪೇಮೆಂಟ್ ಸರ್ವಿಸ್ ಕಂಪನಿಗಳ ಕಸ್ಟಮರ್ ಕೇರ್ ಸೆಂಟರಿಗೆ ಫೋನ್ ಮಾಡಿ ನಿಮ್ಮ ಯುಪಿಐ ಐಡಿ ಬ್ಲಾಕ್ ಮಾಡಿಸಿ.
ಮೇಲೆ ತಿಳಿಸಲಾದ ಎಲ್ಲ ಕ್ರಮಗಳನ್ನು ಕೈಗೊಂಡ ಮೇಲೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿ. ಎಫ್ ಐ ಆರ್ ದಾಖಲಿಸಿದ ಕಾಪಿ ಒಂದನ್ನು ಪಡೆದುಕೊಳ್ಳಿ. ಅಕಸ್ಮಾತ್ ನಿಮ್ಮ ಫೋನ್ ಯಾವುದೋ ಅಕ್ರಮ ಕೆಲಸಗಳಿಗೆ ಬಳಕೆಯಾದಲ್ಲಿ ಅಥವಾ ನಿಮ್ಮ ಹಣ ಕದಿಯಲ್ಪಟ್ಟಲ್ಲಿ ಆಗ ಸಾಕ್ಷ್ಯಾಧಾರಕ್ಕಾಗಿ ನಿಮ್ಮ ಬಳಿ ಎಫ್ ಐ ಆರ್ ಕಾಪಿ ಇರಲೇಬೇಕಾಗುತ್ತದೆ.