ನಳಿನ್ ಕುಮಾರ್ ಕಟೀಲ್ ಅವರ ‘ ನನ ನಮ್ಮ ಕೈಟೆ ‘ ಆಡಿಯೋ ವೈರಲ್ | ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಈ ಮಾತುಕತೆ !
ಬೆಂಗಳೂರು : ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗಿದ್ದು, ಅದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಅಪ್ತರ ಬಳಿ ತುಳು ಭಾಷೆಯಲ್ಲಿ ಮಾತುಕತೆ ನಡೆಸಿರುವ ಹೇಳಿದ್ದರೆನ್ನಲಾದ ‘ ನನ ನಮ್ಮ ಕೈಟೆ ‘ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡಿಯೋ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಲಿದೆ.
‘ ಜಗದೀಶ್ ಶೆಟ್ಟರ್, ಈಶ್ವರಪ್ಪ ಟೀಮ್ ಅನ್ನೆ ಹೊರಗಿಡಲಾಗುವುದು. ಇನ್ನು ಹೊಸ ಟೀಮ್ ಮಾಡುವುದು. ಯಾರಿಗೂ ಹೇಳಲು ಹೋಗಬೇಡಿ. ಏನೂ ತೊಂದರೆ ಇಲ್ಲ. ಹೆದರಬೇಡಿ. ನಾವಿದ್ದೇವೆ. ಯಾರಿಗೂ ಹೇಳಬಾರದೆಂದು ಹೇಳಿದ್ದಾರೆ. ಏನೂ ಹೆದರಬೇಡಿ. ಇಲ್ಲಿನವರನ್ನು ಯಾರೂ ಮಾಡುವುದಿಲ್ಲ. ದೆಹಲಿಯಿಂದ ಹಾಕುತ್ತಾರೆ. ಒಟ್ಟು ಮೂರು ಹೆಸರಿದೆ. ಅದರಲ್ಲಿ ಯಾರು ಬೇಕಾದರೂ ಆಗುವ ಚಾನ್ಸ್ ಇದೆ. ಏನೇ ಆದರೂ, ‘ ನನ ನಮ್ಮ ಕೈಟೆ ‘ (ಇನ್ನು ಎಲ್ಲಾ ನಮ್ಮ ಕೈಯಲ್ಲೇ) ‘ ಎನ್ನುವ ಈ ಆಡಿಯೋ ರೂಪದ ಮಾತುಕತೆ ನಿನ್ನೆ ತಡರಾತ್ರಿಯಿಂದ ಭಾರೀ ಸಂಚಲನ ಸೃಷ್ಟಿಸುತ್ತಿದೆ. ರಾಜ್ಯ ರಾಜಕಾರಣದಲ್ಲಿ ಈ ಆಡಿಯೋ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ. ಅದಕ್ಕೂ ಮೊದಲು, ಇದರ ಸತ್ಯಾಸತ್ಯತೆ ತಿಳಿದುಬರಬೇಕಿದೆ. ಇದು ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದ ಅಥವಾ ಅವರ ಧ್ವನಿ ಹೋಲುವ ನಕಲಿ ಆಡಿಯೋನಾ ಎನ್ನುವುದು ಸದ್ಯಕ್ಕೆ ತಿಳಿದಿಲ್ಲ. ಆದರೆ ಧ್ವನಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ತದ್ರೂಪಿ ಹೋಲಿಕೆಯಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದು ತನಿಖೆಗಾಗಿ ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಬಿಜೆಪಿ ನಿನ್ನೆ ತಡರಾತ್ರಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಅದು ಇಂತಿದೆ.
ಆಡಿಯೋ ಮೂಲಕ ಕಳಂಕ ತರುವ ಕೆಲಸ; ತನಿಖೆಗೆ ನಳಿನ್ಕುಮಾರ್ ಕಟೀಲ್ ಮನವಿ ಎಂದಿದೆ ರಾಜ್ಯ ಬಿಜೆಪಿ.
“ಬೆಂಗಳೂರು: “ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ಮಾದರಿಯಲ್ಲಿ ನಕಲಿ ಆಡಿಯೋ ಒಂದನ್ನು ಯಾರೋ ಕಿಡಿಗೇಡಿಗಳು ವಾಟ್ಸ್ ಆ್ಯಪ್ನಲ್ಲಿ ಹರಿಬಿಟ್ಟಿದ್ದು, ಇದರ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಪಕ್ಷಕ್ಕೆ ಮತ್ತು ಸರಕಾರಕ್ಕೆ ಕೆಟ್ಟ ಹೆಸರು ತರುವ ದೃಷ್ಟಿಯಿಂದ ಈ ಆಡಿಯೋವನ್ನು ಹರಿಬಿಟ್ಟಿದ್ದು, ತನಿಖೆ ನಡೆಸಿದರೆ ಅದರ ನಕಲಿತನ ಸಾಬೀತಾಗಲಿದೆ. ಆದ್ದರಿಂದ ತಾವು ಅದರ ಹಿಂದಿರುವ ಕಿಡಿಗೇಡಿಗಳು ಯಾರೆಂಬ ಕುರಿತು ತನಿಖೆ ನಡೆಸಲು ಒತ್ತಾಯಿಸುತ್ತಿರುವುದಾಗಿ ಶ್ರೀ ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ. ಎಂದು ಬಿಜೆಪಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಯಾರೇ ಬಂದರೂ ನಮಗೆ ಬೇಕಾದವರೇ ಆಗಿರಲಿದ್ದು ಮೂರು ಜನರ ಹೆಸರು ಹೈಕಮಾಂಡ್ ಗಮನದಲ್ಲಿದೆ ಎಂದಿರುವ ನಳೀನ್ ಕುಮಾರ್ ಕಟೀಲ್ ಅವರು, ಆ ಮೂಲಕ ನಾಯಕತ್ವ ಬದಲಾವಣೆಯಿಲ್ಲ ಎಂಬ ಯಡಿಯೂರಪ್ಪ ಅವರ ಆತ್ಮವಿಶ್ವಾಸಕ್ಕೆ ಬಿಗ್ ಷಾಕ್ ನೀಡಿದ್ದಾರೆ.
ಅದೇ ಕಾಲಕ್ಕೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿರುವ ಮಾಜಿ ಮುಖ್ಯಮಂತ್ರಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಂಡ್ ಟೀಮು ಹೊರಬೀಳಲಿದೆ ಎಂಬ ಅಂಶವನ್ನೂ ಕಟೀಲ್ ಬಹಿರಂಗಪಡಿಸಿರುವುದು ಕುತೂಹಲಕಾರಿಯಾಗಿದೆ.
ಇದು ನಳಿನ್ ಕುಮಾರ ಕಟೀಲು ಅವರ ಧ್ವನಿಯೇ ಹೌದೇ ಎನ್ನುವುದು ಖಚಿತವಾಗಬೇಕಿದೆ. ಇಡೀ ರಾಜ್ಯ ಈ ಆಡಿಯೋವನ್ನು ಕೇಳಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಕಾದು ನೋಡುತ್ತಿದೆ.