ಸಂದೇಶ ಸ್ಪಷ್ಟವಾಗಿದೆ ಎಂದು ಭಾವಿಸುತ್ತೇನೆ ! | ಸಿಎಂ ಯಡಿಯೂರಪ್ಪ-ಮೋದಿ ಭೇಟಿ ಬೆನ್ನಲ್ಲೇ ರೇಣುಕಾಚಾರ್ಯ ಟ್ವೀಟ್ ಮಾಡಿ ವಿರೋಧಿಗಳಿಗೆ ಸಂದೇಶ !
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಏನೆಲ್ಲಾ ವಿಷಯ ಅಲ್ಲಿ ಚರ್ಚೆಗೆ ಬರಲಿದೆ ಎಂಬುದು ರಾಜಕೀಯ ವಲಯದಲ್ಲಿ ಸಾಕಷ್ಟು ಆಸಕ್ತಿ ಮೂಡಿಸಿತ್ತು. ನಿನ್ನೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಸುಮಾರು 25 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಇದು ಅಧಿಕೃತ ಭೇಟಿ ಎಂದು ಸಿಎಂ ಕಚೇರಿ ತಿಳಿಸಿದೆ. ಆದರೆ ಮೂಲಗಳ ಪ್ರಕಾರ ಇದಕ್ಕೂ ಹೊರತಾಗಿ ಹೆಚ್ಚಿನ ಮಾತುಕತೆ ನಡೆದಿದೆ ಎಂದು ಸಿಎಂ ನಿಷ್ಠರು ತಿಳಿಸಿದ್ದಾರೆ.
ಪಿಎಂ-ಸಿಎಂ ಭೇಟಿಯಿಂದಾಗಿ ರಾಜ್ಯದಲ್ಲಿ ಹಲವು ದಿನಗಳಿಂದ ಚರ್ಚೆಯಲ್ಲಿದ್ದ ನಾಯಕತ್ವ ಬದಲಾವಣೆ ವಿಷಯತ್ತೆ ಫುಲ್ ಸ್ಟಾಪ್ ಹಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂಪಿ ರೇಣುಕಾಚಾರ್ಯ ಟ್ವೀಟ್ ಮಾಡಿದ್ದು, ‘ ಸಂದೇಶ ಸ್ಪಷ್ಟವಾಗಿದೆ ‘ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ವಿರೋಧಿ ಬಣಕ್ಕೆ ಸಂದೇಶ ರವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಸಂದೇಶವನ್ನು ಭಿನ್ನಮತೀಯ ನಾಯಕರುಗಳಿಗೆ ರವಾನಿಸಿದ್ದಾರೆ. ಈ ಭೇಟಿ ನಾಯಕತ್ವ ಬದಲಾವಣೆ ಸಂಬಂಧ ನಡೆಯುತ್ತಿದ್ದ ಎಲ್ಲಾ ಚರ್ಚೆಗಳಿಗೆ ಇತಿಶ್ರೀ ಹೇಳಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಎಂಎಲ್ ಸಿ ಲೆಹರ್ ಸಿಂಗ್ ಅವರ ಜೊತೆ ತೆರಳಿದ್ದರು. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡುವ ವಿಶ್ವಾಸದಲ್ಲಿದ್ದಾರೆ. ಕ್ಯಾಬಿನೆಟ್ ಪುನರ್ರಾಚನೆಗೆ ಕೇಂದ್ರ ನಾಯಕತ್ವದ ಅನುಮತಿ ಪಡೆಯಲು ಸಿಎಂ ಬಯಸುತ್ತಿದ್ದಾರೆ. ಸಂಪುಟ ಪುನರ್ರಾಚನೆ ಫಲಿತಾಂಶ ಈ ಚರ್ಚೆಯ ನಂತರ ನಿರ್ಧಾರವಾಗಲಿದೆ.
ಪ್ರಧಾನಮಂತ್ರಿಯವರ ಭೇಟಿಯ ನಂತರ, ಕರ್ನಾಟಕದಿಂದ ಹೊಸದಾಗಿ ನೇಮಕಗೊಂಡ ಕೇಂದ್ರ ಸಚಿವರಾದ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಎ ನಾರಾಯಣಸ್ವಾಮಿ ಮತ್ತು ಭಗವಂತ್ ಖುಬಾ ಅವರು ಕರ್ನಾಟಕ ಭವನದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಶನಿವಾರ ಅಧಿಕ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು. ಇಂದು ಅವರು ಬೆಂಗಳೂರಿಗೆ ವಾಪಸ್ ಆಗಮಿಸಲಿದ್ದಾರೆ.