KRS ಅನ್ ಸೇಫ್ ?! ಕೆಆರ್ ಎಸ್ ಬಿರುಕು ಬಿಡದಿದ್ದರೂ ನೀರು ಸೋರಿಕೆ ಆಗ್ತಿದೆ – ನಿವೃತ್ತ ತಹಶೀಲ್ದಾರ್ ಬದರಿನಾಥ್ ಹೇಳಿಕೆ ದಿಗಿಲು ಮೂಡಿಸುವಂತಿದೆ !!
ಕನ್ನಂಬಾಡಿ ಅಣೆಕಟ್ಟು ಬಿರುಕು ಬಿಡದಿದ್ದರೂ, ನೀರು ಸೋರುವಿಕೆ ಪ್ರಾರಂಭವಾಗಿದೆ ಎಂಬ ವಿಷಯವನ್ನು ನಿವೃತ್ತ ತಹಸೀಲ್ದಾರ್ ಬದರೀನಾಥ್ ಹೊರಹಾಕಿದ್ದಾರೆ. ಅವರ ಈ ಹೇಳಿಕೆ ಭಯ ಹುಟ್ಟಿಸುವಂತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದೆ ಸುಮಲತಾ ಅಂಬರೀಷ್ ಅವರು ಕೆಆರ್ಎಸ್ ಅಣೆಕಟ್ಟು ಬಿರುಕು ಮೂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಡ್ಯಾಂ ಬಿರುಕು ಬಿಡದಿದ್ದರೂ ನೀರು ಸೋರುವಿಕೆ ಪ್ರಾರಂಭವಾಗಿದೆ. ಈ ಬಗ್ಗೆ ಸರ್ಕಾರ ರಚಿಸಿದ ಸಮಿತಿಯಿಂದ 2600 ಪುಟಗಳ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದರು.
ಬಿರುಕು ಬಿಡುವುದು ದೊಡ್ಡ ಸಮಸ್ಯೆ ನಿಜ, ಆದರೆ ಅಲ್ಟಿಮೇಟ್ ಸಮಸ್ಯೆ ಅಣೆಕಟ್ಟಿನಿಂದ ನೀರು ತಂತಾನೇ ಹೊರಬಾರದೆನ್ನುವುದು. ಈಗ ಬಿರುಕು ಬಿಡದೇ ಇದ್ದರೂ, ನೀರು ಸೋರಿಕೆ ಆಗುತ್ತಿದೆ. ಅಂದರೆ, ಅಣೆಕಟ್ಟು ತನ್ನ ಹಿಂದಿನ ಪ್ರಮಾಣದಲ್ಲಿ ಭದ್ರ ಇಲ್ಲ ಎಂದು ತಾನೇ ಅರ್ಥವಲ್ಲವೇ ?! ಇದರಿಂದಾಗಿ ಕೆಆರ್ ಎಸ್ ಜಲಾಶಯದ ಪ್ರದೇಶದಲ್ಲಿ ಲಕ್ಷಾಂತರ ಮಂದಿ ವಾಸಿಸುತ್ತಿದ್ದು ಅವರ ಸುರಕ್ಷೆಯ ಪ್ರಶ್ನೆ ಇದೀಗ ಎದ್ದಿದೆ.
ಹಿಂದೆ ಮೈಸೂರು ಮತ್ತು ಮದ್ರಾಸ್ ಸರ್ಕಾರದ ಒಪ್ಪಂದದಂತೆ 1.25 ಲಕ್ಷ ಎಕರೆಗೆ ನೀರಾವರಿ ಆಗಬೇಕಿತ್ತು. ಆದರೆ ಈಗಲೂ ಕೇವಲ 96,419 ಎಕರೆಗೆ ಮಾತ್ರ ನೀರಾವರಿ ಆಗುತ್ತಿದೆ. ಮಳವಳ್ಳಿ ತಾಲೂಕಿನ ಬಿ.ಜಿ. ಪುರ ಹೋಬಳಿಯ ಕೆಲವು ಗ್ರಾಮಗಳನ್ನು ವಿಶ್ವೇಶ್ವರಯ್ಯ ಅವರು ಆಗಲೇ ಸಿದ್ಧಪಡಿಸಿರುವ ನಕ್ಷೆಯಲ್ಲಿ ಸೇರಿಸಿದ್ದರು. ಆದರೆ ಈಗಲೂ ಆ ಪ್ರದೇಶಗಳು ಖುಷ್ಕಿಯಾಗಿವೆ. ಹಳೆಯ ಒಪ್ಪಂದದ ಪ್ರಕಾರ ಆ ಪ್ರದೇಶವನ್ನು ನೀರಾವರಿಗೆ ಒಳಪಡಿಸಬೇಕಾಗಿತ್ತು ಎಂದರು. ಅಣೆಕಟ್ಟಿನ ಯೋಜನೆ ಸರ್ಕಾರದ ಬಳಿ ಇದ್ದರೂ ಅದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತಂದಿಲ್ಲ. ಅಣೆಕಟ್ಟು ನಿರ್ಮಾಣವಾಗಿ 85 ವರ್ಷ ಕಳೆದರೂ ಅದರ ಯೋಜನೆಗಳ ಪೂರ್ಣ ಸ್ವರೂಪದ ಕಾರ್ಯ ಇಂದಿಗೂ ಪೂರ್ಣವಾಗಿಲ್ಲ ಎಂದವರು ಹೇಳಿದರು.
ಒಟ್ಟಾರೆ ಮೇಲಿನ ಹೇಳಿಕೆಯ ಪ್ರಕಾರ, ನಿವೃತ್ತ ತಹಸೀಲ್ದಾರ್ ಬದರಿನಾಥ್ ಅವರ ಹೇಳಿಕೆಯನ್ನು ಗಮನಿಸಿದರೆ, ಕೆ ಆರ್ ಎಸ್ ಎಷ್ಟು ಸೇಫ್ ಎಂಬ ಪ್ರಶ್ನೆ ಮೂಡುತ್ತಿದೆ.