ಸುಳ್ಯ ವಿವಾಹದ ಮನೆಯೊಂದಕ್ಕೆ ದಾಳಿ ನಡೆಸಿದ ಅಧಿಕಾರಿಗಳು | ಇನ್ನೇನು ತಾಳಿಗೆ ಕೊರಳೊಡ್ಡಲು ತಯಾರಾಗಿದ್ದ ಬಾಲಕಿಯ ರಕ್ಷಣೆ, ಬಾಲ್ಯವಿವಾಹಕ್ಕೆ ತಡೆ
ಸುಳ್ಯ: ವ್ಯಕ್ತಿಯೋರ್ವರ ಮದುವೆ ಸಮಾರಂಭಕ್ಕೆ ರಾತ್ರಿ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದು, ಹದಿನೈದರ ಹರೆಯದ ಬಾಲಕಿಗೆ ನಡೆಯಲಿದ್ದ ಬಾಲ್ಯವಿವಾಹವೊಂದನ್ನು ತಡೆದ ಪ್ರಕರಣ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ದುಗಲಡ್ಕದ ಕಂದಡ್ಕ ಎಂಬಲ್ಲಿ ನಡೆದಿದೆ.
ಹದಿನೈದರ ಹರೆಯದ ಮೈಸೂರಿನ ಬಾಲಕಯೊಬ್ಬಳಿಗೆ ತಮಿಳು ಕುಟುಂಬವೊಂದರ ಯುವಕನ ಜೊತೆ ಜು.15 ರಂದು ಜೊತೆ ಮದುವೆ ಕಾರ್ಯಕ್ಕೆ ಸಿದ್ದತೆ ನಡೆದಿದ್ದು, ಬಾಲಕಿಗೆ 18 ವರ್ಷ ತುಂಬದೆ ಇರುವ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಿ.ಡಿ.ಪಿ.ಒ. ಶ್ರೀಮತಿ ರಶ್ಮಿ ಅಶೋಕ್ ನೇತೃತ್ವದಲ್ಲಿ ಮೇಲ್ವಿಚಾರಕಿ ಹಾಗೂ ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್ ಹಾಗೂ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಲಾಗಿದೆ.
ದಾಳಿಯ ನಂತರದಲ್ಲಿ ಹುಡುಗಿಯ ಕಡೆಯವರಲ್ಲಿ ವಿಚಾರಿಸಿದಾಗ ಹುಡುಗಿಯ ವಯಸ್ಸಿಗೆ ಸಂಬಂಧಿಸಿದ ಯಾವುದೇ ನಿಖರವಾದ ದಾಖಲೆಯನ್ನು ನೀಡಿರಲಿಲ್ಲ. ತದನಂತರ ಬಾಲ್ಯವಿವಾಹ ಎಂಬ ಪಿಡುಗಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ ಅಧಿಕಾರಿಗಳು ಹುಡುಗಿಗೆ 18 ವರ್ಷ ತುಂಬಿದ ಬಳಿಕ ಮದುವೆ ಮಾಡಿಸುವುದಾಗಿ ಹೇಳಿದ್ದು ಹೆತ್ತವರೂ ಇದಕ್ಕೆ ಒಪ್ಪಿಗೆ ಸೂಚಿಸಿ ಮೈಸೂರಿಗೆ ಹಿಂತಿರುಗಲು ನಿರ್ಧಾರಿಸಿದ್ದಾರೆ.