ಶಾಲಾ ಮಕ್ಕಳಿಗೆ ಸಿಗಲಿದೆ ಹೊಸ ಭಾಗ್ಯ..ಬಿಸಿಯೂಟದ ಬಾಬ್ತು ಎಂಬ ಯೋಜನೆಯಡಿಯಲ್ಲಿ ಖಾತೆಗೆ ಬೀಳಲಿದೆ ಹಣ..ಯಾರಿಗೆ ಎಷ್ಟು ಬೀಳಲಿದೆ ಗೊತ್ತಾ?
ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಅವರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು, ಹಾಗೂ ಬೇಸಿಗೆ ರಜೆಯಲ್ಲಿ ಉತ್ತಮ ಆಹಾರ ನೀಡುವ ಉದ್ದೇಶದಿಂದ ಈ ಬಾರಿ ಬಿಸಿಯೂಟದ ಅಕ್ಕಿ ಮತ್ತು ಗೋಧಿಯನ್ನು ಮನೆಗಳಿಗೇ ತಲುಪಿಸುವ ವ್ಯವಸ್ಥೆಯನ್ನೂ ಶಿಕ್ಷಣ ಇಲಾಖೆಯ ವತಿಯಿಂದ ಮಾಡಲಾಗಿತ್ತು.ಆದರೆ ಇದೀಗ ಅದನ್ನು ಅಹಾರವಾಗಿ ಪರಿವರ್ತಿಸಲು ತಗುಲುವ ವೆಚ್ಚವನ್ನೂ ಸರ್ಕಾರವೇ ಭರಿಸಲು ಮುಂದಾಗಿದ್ದು, ಶಿಕ್ಷಣ ಇಲಾಖೆಯು ಬೇಕಾದಂತಹ ಕ್ರಮಗಳನ್ನು ಕೈಗೊಂಡಿದೆ.
ಮೇ ಮತ್ತು ಜೂನ್ ತಿಂಗಳ ಬೇಸಿಗೆ ರಜೆಯ 50 ದಿನಗಳಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯ ಪ್ರತೀ ಮಕ್ಕಳಿಗೆ ಈ ಹಣ ದೊರೆಯಲಿದ್ದು,1ರಿಂದ 5ನೇ ತರಗತಿ ಮಕ್ಕಳಿಗೆ ತಲಾ 250 ರೂ, 6ರಿಂದ 8ನೇ ತರಗತಿ ಮಕ್ಕಳಿಗೆ ತಲಾ 390 ರೂ. ದೊರೆಯಲಿದೆ. ‘ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚ ಎಂಬ ಯೋಜನೆಯಡಿಯಲ್ಲಿ ನೇರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಸದ್ಯ ಎಲ್ಲಾ ವಿದ್ಯಾರ್ಥಿಗಳಲ್ಲೂ ಬ್ಯಾಂಕ್ ಖಾತೆ ಇದ್ದು, ಒಂದುವೇಳೆ ಖಾತೆ ಇಲ್ಲದ ವಿದ್ಯಾರ್ಥಿಗಳಿಗೆ ಸಮೀಪದ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ’ಶೂನ್ಯ ಬ್ಯಾಂಕ್ ಖಾತೆ’ಗಳನ್ನು ತೆರೆಯಲು ಕ್ರಮ ಕೈಗೊಳ್ಳುವಂತೆ ಮುಖ್ಯೋಪಾಧ್ಯಾಯರಿಗೆ ಶಿಕ್ಷಣ ಇಲಾಖೆ ಸೂಚಿಸಿದ್ದು ಆದಷ್ಟು ಬೇಗ ಖಾತೆ ತೆರೆಯಲು ಸೂಚಿಸಿದೆ.
ಶಾಲಾ ಮಕ್ಕಳಿಗೆ 50 ದಿನಗಳ ಬೇಸಿಗೆ ರಜೆಯಿದ್ದು, ಈ ಅವಧಿಯಲ್ಲಿ ‘ಒನ್ ಟೈಮ್ ವೆಲ್ಫೇರ್ ಮೆಷರ್’ ಅಡಿಯಲ್ಲಿ ಅಕ್ಕಿ, ಗೋಧಿ ಒದಗಿಸಲಾಗಿದ್ದು,ಇದಕ್ಕೆ ಪೂರಕವಾಗಿ ಬೇಕಾದ ತೊಗರಿ ಬೇಳೆ, ಉಪ್ಪು, ಅಡಿಗೆ ಎಣ್ಣೆ ಇತ್ಯಾದಿ ವಸ್ತುಗಳ ಖರೀದಿಗಾಗಿ ಈ ಹಣವನ್ನು ಅಡುಗೆ ವೆಚ್ಚ (ಪರಿವರ್ತನಾ ವೆಚ್ಚ)ವಾಗಿ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
1ನೇ ತರಗತಿಗೆ ದಾಖಲಾಗುವ ಮಕ್ಕಳ ಹೆಸರಲ್ಲೂ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ’ಶೂನ್ಯ ಬ್ಯಾಂಕ್ ಖಾತೆ’ ತೆರೆಯಲು ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.