ತಿಂಗಳಾಡಿ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೆ
ಸುಳ್ಯ ತಾಲೂಕಿನ ಬೆಳ್ಳಾರೆ ಹಾಗೂ ಪುತ್ತೂರು ತಾಲೂಕಿನ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೆ ಏರಲಿದೆ.
ರಾಜ್ಯದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡದ 12 ಕೇಂದ್ರಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪುತ್ತೂರು ತಾಲೂಕಿನ ತಿಂಗಳಾಡಿ,ಸುಳ್ಯ ತಾಲೂಕಿನಿಂದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ.
ಪ್ರಸ್ತಾವಿತ ಕೇಂದ್ರಗಳಲ್ಲಿ ಕನಿಷ್ಠ 2 ಎಕ್ರೆ ಜಾಗವಿರಬೇಕೆಂಬ ನಿಯಮವಿದೆ. ಮೇಲ್ದರ್ಜೆಗೇರಿಸಿದ ಬಳಿಕ ಇಬ್ಬರು ಎಂಬಿಬಿಎಸ್ ವೈದ್ಯರು, ಒಬ್ಬರು ಬಿಎಎಂಎಸ್ ವೈದ್ಯರು ಇರುತ್ತಾರೆ. ದಿನದ 24 ತಾಸು ಸೇವೆ ಲಭ್ಯವಾಗಲಿದ್ದು, ಇದನ್ನು ಮಾದರಿ ಆರೋಗ್ಯ ಕೇಂದ್ರವಾಗಿ ರೂಪಿಸುವುದು ಸರಕಾರದ ಉದ್ದೇಶ.
ಒಟ್ಟು 3 ಕೋ.ರೂ. ವೆಚ್ಚದಲ್ಲಿ ಆಸ್ಪತ್ರೆ, 2 ಕೋ.ರೂ. ವೆಚ್ಚದಲ್ಲಿ ವಸತಿಗೃಹ ನಿರ್ಮಾಣವಾಗಲಿದೆ.
ಸಿಬಂದಿಗೆ ಅಲ್ಲೇ ವಸತಿ ಒದಗಿ ಸುವ ಮೂಲಕ 24*7 ಸೇವೆ ಲಭ್ಯವಾಗಬೇಕೆಂಬುದು ಉದ್ದೇಶ.
ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಮತ್ತು ಯೋಗ ಪ್ರಸಾರದ ಮೂಲಕ ಸಮಗ್ರ ಕ್ಷೇಮ ಕೇಂದ್ರವಾಗಿ ರೂಪಿಸಲಾಗುತ್ತದೆ. ಹೆರಿಗೆ ಸೌಲಭ್ಯವೂ ಲಭ್ಯವಾಗಲಿದೆ