ಕ್ರೀಡಾಲೋಕದ ತೀರ್ಥಕ್ಷೇತ್ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಉನ್ಮಾದ | 18 ವಾರಗಳ ಗರ್ಭಿಣಿ ಆಯ್ಕೆ ಟ್ರಯಲ್ ನಲ್ಲಿ ಭಾಗಿ !
ನ್ಯೂಯಾರ್ಕ್: ಕ್ರೀಡಾ ಲೋಕದ ತೀರ್ಥ ಕ್ಷೇತ್ರ ಒಲಿಂಪಿಕ್ಸ್ನ ಪವಿತ್ರ ನೆಲದಲ್ಲಿ ಹೆಜ್ಜೆ ಇರಿಸುವುದು ಪ್ರತಿ ಕ್ರೀಡಾಪಟುವಿನ ಕನಸು. ಎಂಥಾ ಸವಾಲಿನ ನಡುವೆಯೂ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಆಸೆಯನ್ನು ಕೈ ಚೆಲ್ಲುವುದಿಲ್ಲ. ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಕೊನೆಯ ಕ್ಷಣದವರೆಗೆ, ತಮ್ಮ ಪ್ರಯತ್ನವನ್ನು ಜಾರಿಯಲ್ಲಿ ಇಟ್ಟಿರುತ್ತಾರೆ. ಈ ಮಾತಿಗೆ ಈಗ ಅಮೆರಿಕದ ಅಥೇಟ್ ಲಿಂಡ್ಸೇ ಪ್ಲಾಚ್ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದಾರೆ.
ಯಾಕೆಂದರೆ ಆಕೆ ಬೇಬಿ ಬಂಪ್ ಕಾಣುತ್ತಿರುವ, 18 ವಾರದ ಗರ್ಭಿಣಿ. ತಮ್ಮ ಈ ತಾಯ್ತನದ ಬಯಕೆಯ ನಡುವೆಯೂ ಆಕೆ ಅಮೆರಿಕದ ಒಲಿಂಪಿಕ್ಸ್ ತಂಡದ ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಅಷ್ಟೇ ಅಲ್ಲ 18 ಜನ ಓಟದ ರಾಣಿಯರ ಎದುರು ಹದಿನೈದನೆಯ ಸ್ಥಾನಗಳಿಸಿದ್ದಾಳೆ.
ಮುಂಬರುವ ಟೋಕಿಯೊ ಒಲಿಂಪಿಕ್ಸ್ಗೆ ಪೂರ್ವಭಾವಿ ಇತ್ತೀಚೆಗೆ ಅಮೆರಿಕದ ಅಥ್ಲೆಟಿಕ್ಸ್ ತಂಡದ ಆಯ್ಕೆಗೆ ಟ್ರಯ ಆಯೋಜನೆಗೊಂಡಿತ್ತು. 31 ವರ್ಷದ ಲಿಂಡ್ಸೇ ಪ್ಲಾಚ್ ಹೆಪ್ಟಾಥಾನ್ನ 100 ಮೀಟರ್ ಹರ್ಡಲ್ಸ್, ಹೈಜಂಪ್, ಶಾಟ್ ಪುಟ್, 200 ಮೀಟರ್ ಓಟ, ಲಾಂಗ್ ಜಂಪ್ ಮತ್ತು ಜಾವೆಲಿನ್ ಎಸೆತಗಳಲ್ಲಿ ಪಾಲ್ಗೊಂಡು ಗಮನಸೆಳೆದರು. ಗರ್ಭಿಣಿಯಾಗಿರುವ ನಡುವೆಯೂ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ವೈದ್ಯರಿಂದ ಅನುಮತಿ ಪಡೆದುಕೊಂಡಿದ್ದೆ ಎಂದೂ ಅವರು ತಿಳಿಸಿದ್ದಾರೆ.
ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ಆಸೆಯಿಂದ 3ನೇ ಬಾರಿಗೆ ಅಮೆರಿಕ ತಂಡದ ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಂಡ ಲಿಂಡ್ಸೇ ಪ್ಲಾಚ್, ತಾಯಂದಿರು ಎಷ್ಟು ಬಲಿಷ್ಠವಾಗಿರುತ್ತಾರೆ ಎಂದು ತೋರಿಸುವ ಜತೆಗೆ, ತಮ್ಮ ಕ್ರೀಡಾ ಜೀವನವನ್ನು ತಾವಾಗಿಯೇ ಕೊನೆಗೊಳಿಸಬೇಕು, ಬೇರೆ ಯಾರ ಒತ್ತಡದಿಂದಲೂ ಅದು ಕೊನೆಗೊಳ್ಳಬಾರದು ಎಂಬ ಉದ್ದೇಶದಿಂದಲೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 18 ಮಂದಿಯಲ್ಲಿ 15ನೇ ಸ್ಥಾನ ಪಡೆ ಗ್ರೂಪ್ ಕಾರಣ ಅವರ ಒಲಿಂಪಿಕ್ಸ್ ಕನಸು ಭಗ್ನಗೊಂಡಿತು. ಆದರೆ ಅವರ ಸ್ಪೂರ್ತಿ ಬತ್ತಿಲ್ಲ. ಅದು ಮತ್ತಷ್ಟು ಕ್ರೀಡಾಪಟುಗಳಿಗೆ ಸ್ಪೂರ್ತಿ ಆಗಿದೆ.
ಅಂದಹಾಗೆ ಗರ್ಭಿಣಿಯರು ಈ ಹಿಂದೆ ಹಲವು ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ದೃಷ್ಟಾಂತಗಳೂ ನಮ್ಮೆದುರು ಇವೆ.
2004ರ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಜರ್ಮನಿಯ ಬಿಲ್ದಾರ್ತಿ ಕೊರ್ನೆಲಿಯಾ ಪೊಹಿ 30 ವಾರದ ಗರ್ಭಿಣಿಯಾಗಿದ್ದರು. ಇಟಲಿಯ ಸ್ಪೀಡ್ ಸ್ಕೆಟರ್ ಮಾರ್ಟಿನಾ ವಿಪಿನಾ 2014ರ ಸೋಚಿ ವಿಂಟರ್ ಗೇಮ್ಸ್ನಲ್ಲಿ ಪಾಲ್ಗೊಂಡಾಗ ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊಂದಿದ್ದರು ಮತ್ತು ಅವರು ಕಂಚಿನ ಪದಕವನ್ನೂ ಜಯಿಸಿದ್ದರು.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು 3ನೇ ಬಾರಿ ಚಿನ್ನದ ಪದಕ ಜಯಿಸಿದ ಅಮೆರಿಕದ ಬೀಚ್ ವಾಲಿಬಾಲ್ ಆಟಗಾರ್ತಿ ಕೆರಿ ವಾಲ್ ಜೆನ್ನಿಂಗ್ಸ್ ಆಗ 5 ವಾರದ ಗರ್ಭಿಣಿಯಾಗಿದ್ದರು.
ಆದರೆ ಈ ಬಾರಿ ಕೊರೋನಾ ವೈರಸ್ ಕಾಟದಿಂದಾಗಿ ಹೀಗಾಗಿ ಕ್ರೀಡಾಪಟುಗಳಿಗೆ ತಮ್ಮ ಮೊಲೆಯುನ್ನುವ ಮಕ್ಕಳ ಜತೆಗೆ ಟೋಕಿಯೊ ಒಲಿಂಪಿಕ್ಸ್ಗೆ ತೆರಳಲು ಮಾತ್ರ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದೂ ಕ್ರೀಡಾಗ್ರಾಮದಲ್ಲಿ ಅವರು ತಂಗುವಂತಿಲ್ಲ. ಪ್ರತ್ಯೇಕ ಹೋಟೆಲ್ನಲ್ಲಿ ನೆಲೆಸಬೇಕಾಗಿದೆ.