ಆಟವಾಡುತ್ತಾ ಗೋಲಿ ನುಂಗಿದ ಮಗು | ಒಂದು ವರ್ಷದ ಮಗುವಿನ ದುರಂತ ಅಂತ್ಯ
ಚಿಕ್ಕ ಮಕ್ಕಳು ಮನೆಯಲ್ಲಿ ಸುಮ್ಮನೆ ಆಟವಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಡಿ. ಏಕೆಂದರೆ ಇಲ್ಲೊಂದು ಕಡೆ ಆಟವಾಡುತ್ತಿದ್ದ ಗೋಲಿಯೇ ಆ ಮಗುವಿನ ಪ್ರಾಣಕ್ಕೆ ಮುಳುವಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದಲ್ಲಿ ಇಂತಹದ್ದೊಂದು ದುರಂತ ಸಂಭವಿಸಿದೆ.
ಆಟವಾಡುವಾಗ ಗೋಲಿ ನುಂಗಿ ಒಂದು ವರ್ಷ ಎರಡು ತಿಂಗಳ ಮನವೀರ್ ಎಂಬ ಮಗು ಪ್ರಾಣ ಕಳೆದುಕೊಂಡಿದೆ. ಹರೀಶ್ ಎಂಬವರ ಈ ಮಗು ಮನೆಯಂಗಳದಲ್ಲಿ ಆಟವಾಡುತ್ತ ಗೋಲಿಯನ್ನು ಬಾಯಿಗೆ ಹಾಕಿಕೊಂಡಿದೆ. ದುರದೃಷ್ಟವಶಾತ್ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ.
ಇದನ್ನು ಜೊತೆಯಲ್ಲಿದ್ದ ಇನ್ನೊಬ್ಬ ಬಾಲಕ ಪೋಷಕರ ಗಮನಕ್ಕೆ ತಂದಿದ್ದು, ಕೂಡಲೇ ಮಗುವನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆದರೆ ಘಟನೆ ನಡೆದ ಹತ್ತು ಹದಿನೈದು ನಿಮಿಷಗಳಲ್ಲೇ ಅಂದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮಗು ಉಸಿರುಗಟ್ಟಿ ಕೊನೆಯುಸಿರೆಳೆದಿದೆ.
ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇಂತಹ ದುರಂತಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಪೋಷಕರು ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರದೆ, ಹೆಚ್ಚಿನ ಗಮನಹರಿಸಿಬೇಕಾಗಿದೆ.