ಅಪಾರ್ಟ್ಮೆಂಟ್‌ನಲ್ಲಿ ಮಹಿಳೆಯ ಕೊಲೆ | ಚಿನ್ನಾಭರಣಕ್ಕಾಗಿ ಕುತ್ತಿಗೆಗೆ ವಯರ್ ಬಿಗಿದು ಕೊಲೆ

ಉಡುಪಿ : ಬ್ರಹ್ಮಾವರ ಸಮೀಪ ಕುಮ್ರಗೋಡಿನ ಅಪಾರ್ಟ್ಮೆಂಟ್ ವೊಂದರಲ್ಲಿ ಮಹಿಳೆಯೋರ್ವಳನ್ನು ಭೀಕರವಾಗಿ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ‌.
ಗಂಗೊಳ್ಳಿ ಮೂಲದ ವಿಶಾಲ ಗಾಣಿಗ(35) ಕೊಲೆಯಾದ ಮಹಿಳೆ.

 

ಗಂಡನೊಂದಿಗೆ ವಿದೇಶದಲ್ಲಿ ವಾಸವಾಗಿದ್ದ ಈಕೆ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಆಗಮಿದ್ದಳು. ತಂದೆ ಹಾಗೂ ಮಗಳ ಜೊತೆ ಸೋಮವಾರ ಗಂಗೊಳ್ಳಿಯ ಮನೆಗೆ ಹೋಗಿದ್ದು ತನಗೆ ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ಬ್ರಹ್ಮಾವರಕ್ಕೆ ವಾಪಸಾಗಿದ್ದು, ಕೆಲಸ ಮುಗಿಸಿ ಗಂಗೊಳ್ಳಿ ಮನೆಗೆ ಬರುವೆ ಎಂದು ತಿಳಿಸಿ ರಿಕ್ಷಾ ಏರಿದ್ದಾಳೆ.

ಆದರೆ, ಸಂಜೆಯಾದರೂ ಮಗಳು ಮನೆಗೆ ಬಾರದ ಕಾರಣ ಹಾಗೂ ಪೋನ್ ಕೂಡ ರಿಸೀವ್ ಮಾಡದಿರುವುದರಿಂದ ಭಯಗೊಂಡು ತನ್ನ ಇನ್ನೋರ್ವ ಮಗಳೊಂದಿಗೆ ವಿಶಾಲ ಅವರನ್ನು ಹುಡುಕಿಕೊಂಡು ಬ್ರಹ್ಮಾವರಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಗಳು ಅಪಾರ್ಟ್ಮೆಂಟ್ ನ ರೂಮ್ ನಲ್ಲಿ ಕುತ್ತಿಗೆಗೆ ವಯರ್ ಬಿಗಿದ ಸ್ಥಿತಿಯಲ್ಲಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ವಿಶಾಲ ಅವರು ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಚಿನ್ನಾಭರಣಕ್ಕಾಗಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ಇನ್ನಷ್ಟೇ ಹೊರಬೀಳಬೇಕಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕ ಆನಂತಪದ್ಮನಾಭ, ಠಾಣಾಧಿಕಾರಿ ಗುರುನಾಥ್ ಹಾಡಿಮನೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.