ಇನ್ಮುಂದೆ ಎಲ್ಲೇ ಗುರುತರ ಅಪರಾಧ ನಡೆಯಲಿ, ಅಲ್ಲಿ ಅವರು ಪ್ರತ್ಯಕ್ಷವಾಗಲಿದ್ದಾರೆ | ಯಾರವರು ಗೊತ್ತಾ ?!

ಬೆಂಗಳೂರು: ಇವತ್ತಿನಿಂದ ಏನಾದರೂ ಗುರುತರ ಅಪರಾಧ ನಡೆದ ಸಂದರ್ಭದಲ್ಲಿ ಈ ಹೊಸ ಅಧಿಕಾರಿ ಅಲ್ಲಿ ಅಪರಾಧ ನಡೆದಲ್ಲಿ ಪ್ರತ್ಯಕ್ಷ ! ಇಂಥದ್ದೊಂದು ಬೆಳವಣಿಗೆ ದೇಶದಲ್ಲೇ ಮೊದಲಾಗಿದ್ದು, ಇಂದಿನಿಂದ ಇದಕ್ಕೆ ಚಾಲನೆ ಸಿಗುತ್ತಿದೆ.

ವಿದೇಶಗಳಲ್ಲಿ ಇರುವಂತೆ, ದೇಶದ ಪೊಲೀಸ್ ಇತಿಹಾಸದಲ್ಲೇ ಇದೇ ಮೊದಲ ಸಲ ಎಂಬಂತೆ ಕರ್ನಾಟಕ ಗೃಹ ಇಲಾಖೆ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ (ಸೀನ್ ಆಫ್ ಕ್ರೈಮ್ ಆಫೀಸರ್) ಹುದ್ದೆಯಲ್ಲಿ ಗ್ರೂಪ್ ಸೃಷ್ಟಿಸಿದೆ. ಇವರು ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸಾಮಾನ್ಯ ಮನುಷ್ಯರು ಗುರುತಿಸಲಾಗದ ಅತಿ ಸೂಕ್ಷ್ಮ ಸಾಕ್ಷ್ಯಾಧಾರಗಳನ್ನು  ಕೂಡಾ ಸಂಗ್ರಹಿಸಲು ಪಳಗಿದವರಾಗಿರುತ್ತಾರೆ.

ಹೊಸದಾಗಿ ಸೃಜಿಸಲಾಗಿರುವ ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಇಂದು ಜುಲೈ 13ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಸ್ತಾಂತರಿಸಲಿದ್ದಾರೆ. ಪ್ರಥಮ ಹಂತದಲ್ಲಿ 206 ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

ಯಾವುದಾದರೂ ಅಪರಾಧ ಕೃತ್ಯ ನಡೆದ ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಅಲ್ಲಿರುವಂತಹ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಸಂರಕ್ಷಿಸಲು ಈ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದುವರೆಗೆ ಈ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಮೊದಲ ಹಂತದಲ್ಲಿ ಗಂಭೀರ ಸ್ವರೂಪದ ಅಪರಾಧಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿಶೇಷ ತರಬೇತಿ ಪಡೆದ ಈ ತಂಡ ಅಪರಾಧ ಕೃತ್ಯ ನಡೆ ಸ್ಥಳಕ್ಕೆ ಮೊದಲು ಭೇಟಿ ನೀಡಲಿದೆ. ಆ ಮೂಲಕ ಕ್ರೈಮ್ ನಡೆದ ಸ್ಥಳದಲ್ಲಿನ ಎಲ್ಲಾ ಸಾಕ್ಷ್ಯಗಳನ್ನು ಅವರು ಕಾಪಿಡಲಿದ್ದಾರೆ.

ಕೃತ್ಯ ನಡೆದ ಸ್ಥಳದಲ್ಲಿನ ಎಲ್ಲ ಸಾಕ್ಷ್ಯಾಧಾರಗಳನ್ನು ಸಂರಕ್ಷಣೆ ಮಾಡುವುದು, ಆ ನಂತರ ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದರ ಜತೆಗೆ ತನಿಖಾಧಿಕಾರಿಗೆ ಆ ಸಾಕ್ಷ್ಯಾಧಾರಗಳನ್ನು ಒದಗಿಸುವುದು ಸೇರಿ ಇತರ ಅವಶ್ಯ ಕರ್ತವ್ಯಗಳನ್ನು ಮಾಡುತ್ತ ಅಪರಾಧಿಗಳನ್ನು ಅತ್ಯಂತ ಶೀಘ್ರದಲ್ಲಿ ಪತ್ತೆ ಮಾಡಲು ಬೇಕಾಗುವ ಎಲ್ಲ ಕಾರ್ಯಗಳನ್ನು ಈ ಅಧಿಕಾರಿಗಳು ಮಾಡುತ್ತಾರೆ. ಇದರಿಂದ ಅಪರಾಧಿಗಳ ಪತ್ತೆ ಮತ್ತು ಅಪರಾಧ ನಿಯಂತ್ರಣ ಸಾಧ್ಯವಾಗಲಿದ್ದು, ಈ ವ್ಯವಸ್ಥೆ ಪ್ರಮುಖವಾಗಿ ವಿದೇಶಗಳಲ್ಲಿ ಹೆಚ್ಚಾಗಿ ಇದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Leave A Reply

Your email address will not be published.