ಮಂಗಳೂರು ವಿಶ್ವವಿದ್ಯಾನಿಲಯದ ಟೆಲಿಗ್ರಾಂ ಗ್ರೂಪ್ ಗೆ ಅಶ್ಲೀಲ ವಿಡಿಯೋ ಹಾಕಿದ ಪ್ರಾಧ್ಯಾಪಕ
ಮಂಗಳೂರು: ಶಿಕ್ಷಣ ಮತ್ತು ಉನ್ನತ ಹುದ್ದೆಯಲ್ಲಿರುವ ಹಿರಿಯ ವಿದ್ಯಾರ್ಥಿಗಳ ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಅದ್ಯಾಕೋ ಈಗ ವಿವಾದಗಳಿಂದ ಸುದ್ದಿಯಾಗುತ್ತಿದೆ.
ಹೌದು, ವಿಶ್ವವಿದ್ಯಾಲಯದ ಅಧೀನದಲ್ಲಿರುವ ಸರಕಾರಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಅಶ್ಲೀಲ ವಿಡಿಯೋವನ್ನು ಗ್ರೂಪ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ವಿಶ್ವವಿದ್ಯಾನಿಲಯದ ಗೌರವಕ್ಕೆ ಮಸಿ ಬಳಿಯುವ ಕೃತ್ಯ ಎಸಗಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಪದವಿ ಕಾಲೇಜುಗಳ ಸಿಬ್ಬಂದಿಗಳು ಸೇರಿದಂತೆ ಸುಮಾರು 1 ಸಾವಿರಕ್ಕೂ ಅಧಿಕ ಮಂದಿಯ ಟೆಲಿಗ್ರಾಂ ಗ್ರೂಪ್ ಒಂದನ್ನು ರಚಿಸಲಾಗಿದೆ. ಪರೀಕ್ಷೆಗಳ ಹಾಗೂ ಇತರ ಮಾಹಿತಿ ನೀಡುವ ಕಾರಣಕ್ಕಾಗಿಯೇ ವಿಶ್ವವಿದ್ಯಾಲಯದಿಂದಲೇ ಅಧಿಕೃತವಾಗಿ ಈ ಗ್ರೂಪ್ ರಚಿಸಲಾಗಿತ್ತು.
ಆದರೆ ಈ ಗ್ರೂಪ್ ಗೆ ಕೊಡಗು ಜಿಲ್ಲೆಯ ಆಂಗ್ಲಭಾಷೆ ಪ್ರಾಧ್ಯಾಪಕರೊಬ್ಬರು ಅಶ್ಲೀಲ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಇತರ ಪ್ರಾಧ್ಯಾಪಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ವಿಶ್ವವಿದ್ಯಾಲಯವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಸಂಬಂಧಪಟ್ಟ ಪ್ರಾಧ್ಯಾಪಕರಿಗೆ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದೆ. ಸೈಬರ್ ತಜ್ಞರ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಆಕಸ್ಮಿಕವಾಗಿ ವಿಡಿಯೋ ಬಂದಿದೆಯೋ ಅಥವಾ ಉದ್ದೇಶಪೂರ್ವಕವಾಗಿ ಹಾಕಿದ್ದಾರೆಯೇ ಎಂಬುದು ತನಿಖೆಯ ನಂತರ ತಿಳಿಯಲಿದೆ.