ದಕ್ಷಿಣ ಕನ್ನಡ, ಸುಳ್ಯ : ಜೀತದ ಅನಿಷ್ಟ ಇನ್ನೂ ಜೀವಂತ | ಸಂಬಳವಿಲ್ಲದೆ ದುಡಿಮೆ ಮಾಡುತ್ತಿದ್ದ ಮಕ್ಕಳ ಮಹಿಳೆಯರ ರಕ್ಷಣೆ..ಜೀತದಾಳು ಪದ್ಧತಿಗೆ ನಮ್ಮದೊಂದು ಧಿಕ್ಕಾರವಿರಲಿ
ಜೀತದಾಳು ಪದ್ಧತಿ ದೇಶಾದ್ಯಂತ ನಿರ್ಮೂಲನೆಗೊಂಡಿದೆ ಎನ್ನುವಷ್ಟರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಂಜದ ಕರೀಕ್ಕಳದಲ್ಲಿ ಜೀತದಾಳು ಪದ್ಧತಿಯಲ್ಲಿ ಮಹಿಳೆಯರನ್ನು ಹಾಗೂ ಮಕ್ಕಳನ್ನು ಸಂಬಳ ರಹಿತವಾಗಿ ದುಡಿಸಿಕೊಂಡಿರುವ ಬಗ್ಗೆ ಮಾಹಿತಿಯ ಮೇರೆಗೆ,ಜಿಲ್ಲಾಧಿಕಾರಿಗಳ ಆದೇಶದೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ.
ಘಟನೆ ವಿವರ:ಸುಳ್ಯ ತಾಲೂಕಿನ ಪಂಜ ಸಮೀಪದ ಕರೀಕ್ಕಳ ವಿಶ್ವನಾಥ್ ಭಟ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ದಾಳಿಯ ವೇಳೆ ಸುಮಾರು 8ರಿಂದ ಹತ್ತು ಮಕ್ಕಳನ್ನು ದುಡಿಸುತ್ತಿರುವುದು ಕಂಡುಬಂದಿದೆ.ಈ ದುಡಿಮೆಗೆ ಯಾವುದೇ ರೀತಿಯ ವೇತನ ನೀಡದೆ, ಜೀತದಾಳಾಗಿ ಇರುತ್ತಿದ್ದರಲ್ಲದೆ, ಈ ಮೊದಲು ಪುಟ್ಟ ಮಕ್ಕಳು ದನ ಮೇಯಿಸುವ ವಿಡಿಯೋ ಕೂಡಾ ವೈರಲ್ ಆಗಿತ್ತು.
ಈ ಎಲ್ಲಾ ವಿಚಾರಗಳ ಬಗ್ಗೆ ಸಾಮಾಜಿಕ ಸಂಘಟನೆಯಾದ ನೀತಿ ತಂಡಕ್ಕೆ ಮಾಹಿತಿ ದೊರಕಿದ್ದು,ಇದನ್ನೇ ಪೂರಕವಾಗಿಟ್ಟುಕೊಂಡು ಬಚ್ಪನ್ ಬಚಾವೋ ಸಂಸ್ಥೆಯು ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಿಗೆ ದೂರು ನೀಡಿತ್ತು.ಈ ದೂರಿನಾಧಾರ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಾದ ಪಲ್ಲವಿ ಆಕುರಾತಿ ಐಎಎಸ್ ಅವರು ದ.ಕ ಜಿಲ್ಲಾಧಿಕಾರಿಗಳಿಂದ ಘಟನಾ ವಿವರ ತಿಳಿದು, ಪೊಲೀಸ್ ದಾಳಿ ನಡೆಸಿ ಮಕ್ಕಳನ್ನು ರಕ್ಷಣೆ ಮಾಡುವುದಾಗಿ ಆದೇಶ ಹೊರಡಿಸಿದರು.
ಆ ಬಳಿಕ ದಾಳಿ ನಡೆಸಿದಾಗ ಮಾನಸಿಕ ಅಸ್ವಸ್ಥರು,ಮಹಿಳೆಯರು, ಪುಟ್ಟ ಮಕ್ಕಳು ಕಂಡುಬಂದಿದ್ದು, ಮನೆಯವರು ಸಾಮಾಜಿಕ ಸೇವೆ ಮಾಡುತ್ತಿದ್ದೇವೆ ಎಂಬುದಾಗಿ ಸಮಾಜಾಯಿಷಿಯನ್ನೂ ಹೇಳಿಕೊಂಡು, ತಪ್ಪಿಸುವ ನಾಟಕವನ್ನು ಮಾಡಿದ್ದಾರೆ. ಆದರೆ ಟ್ರಸ್ಟ್ ನೋಂದಣಿಗಳು ಅಥವಾ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳೂ ಇವರ ಬಳಿ ಇಲ್ಲವಾಗಿದ್ದರಿಂದ 48 ಗಂಟೆಗಳ ಒಳಗಾಗಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.
ಒಟ್ಟಿನಲ್ಲಿ ಜೀತದಾಳು ಪದ್ಧತಿಯು ರಾಷ್ಟ್ರದಲ್ಲೇ ಮಾಸಿ ಹೋಗಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುದ್ದಿಯಾದದ್ದು ಬುದ್ಧಿವಂತರ ಜಿಲ್ಲೆಗೆ ಕಳಂಕವಾಗಿದೆ.