ಪತಿಗೆ ಅರಿವಿಲ್ಲದಂತೆಯೇ ಪತ್ನಿ ರಾತ್ರೋರಾತ್ರಿ ಶ್ರೀಮಂತಳಾಗಿದ್ದಳು | ಪತ್ನಿಯ ವ್ಯವಹಾರ ಕುಶಲತೆಗೆ ಮೊದಲು ಖುಷಿಪಟ್ಟಿದ್ದ ಗಂಡ ಕೊನೆಗೆ ಬೆಚ್ಚಿ ಬಿದ್ದಿದ್ದ !!
ಅಹಮದಾಬಾದ್: ಆತನ ಪತ್ನಿ ರಾತ್ರೋರಾತ್ರಿ ಶ್ರೀಮಂತಳಾಗಿದ್ದಳು. ಹೇಗೆಂದು ತಿಳಿಯದೇ ಆಕೆಯ ಗಂಡ ತಲೆಕೆಡಿಸಿಕೊಂಡಿದ್ದ. ಒಟ್ಟಾರೆ ಆತನಿಗೊಂದು ಒಳಗೊಳಗೆ ಖುಷಿಯಾಗಿತ್ತು. ಇಷ್ಟೆಲ್ಲಾ ಸಂಪತ್ತನ್ನು ಹೇಗೆ ಗಳಿಸಿದೆ ಎಂದು ಆತ ಪತ್ನಿಯನ್ನು ಕೇಳಿದ್ದ. ಆದರೆ ಆಕೆ ಏನೂ ಬಾಯಿಬಿಟ್ಟಿರಲಿಲ್ಲ.
ಆದರೆ ಆತನ ಸಂತೋಷ ತುಂಬ ಹೊತ್ತು ಉಳಿಯಲಿಲ್ಲ. ಏಕೆಂದರೆ ಪತ್ನಿ ಅಡಗಿಸಿಟ್ಟಿದ್ದ ದಾಖಲಾತಿಗಳನ್ನು ನೋಡಿ ಬೆಚ್ಚಿಬಿದ್ದಿದ್ದ !
ಬದುಕಿದ್ದ ಪತಿಯನ್ನೇ ಸತ್ತುಹೋದ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆ ಪತ್ನಿ ಮಹಾಶಯಳು, ವಿಮಾ ಸಂಸ್ಥೆಯಿಂದ ಬರಬೇಕಿದ್ದ 18.5 ಲಕ್ಷ ರೂ.ಗಳನ್ನು ಪಡೆದು ಕೊಂಡು ತನ್ನ ವ್ಯಾನಿಟಿಬ್ಯಾಗನ್ನು ಭರ್ತಿ ಮಾಡಿಕೊಂಡು ಮುಗುಳ್ನಗುತ್ತಾ ಕುಳಿತಿದ್ದಳು !
ಈ ಘಟನೆ ಗುಜರಾತನ ಅಹಮದಾಬಾದಿನಲ್ಲಿ ನಡೆದಿದೆ. ಅಲ್ಲಿನ ನೀಮೇಶ್ ಮರಾಠಿ ಎನ್ನುವವರು ವಿಮೆ ಮಾಡಿಸಿದ್ದರು. ಇದರ ನಿಮಯದ ಪ್ರಕಾರ, ಅದು ಮೆಚ್ಯುರಿಟಿ ಆಗುವ ಒಳಗೆ ಅವರೇನಾದರೂ ಮೃತಪಟ್ಟರೆ, ಆ ವಿಮೆಯ ಹಣ ನಾಮಿನಿ ಆಗಿರುವ ಪತ್ನಿಗೆ ಹೋಗುತ್ತಿತ್ತು. ಇದನ್ನು ಅರಿತ ಆತನ ಪತ್ನಿ ನಂದಾ ಮರಾಠಿ ಪತ್ನಿ ತಮ್ಮ ಪತಿ ಮೃತಪಟ್ಟಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದರು. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪತಿ ವಿಚಾರಣೆ ಮಾಡಿ ಹುಡುಕಾಡಿದಾಗ ಅವರಿಗೆ ತಾವು ಮೃತಪಟ್ಟಿರುವ ವಿಷಯ ಅವರಿಗೆ ಗೊತ್ತಾಗಿದೆ !! ಯಾಕೆಂದರೆ ಅವರು ಸತ್ತುಹೋದ ರೆಕಾರ್ಡ್ ಆತನಿಗೆ ಸಿಕ್ಕಿದೆ. ಕೂಡಲೇ ಪೊಲೀಸರಿಗೆ ಅವರು ದೂರು ನೀಡಿದ್ದಾರೆ.
ಪತ್ನಿ ಹಾಗೂ ಆ ನಕಲಿ ದಾಖಲೆ ಸೃಷ್ಟಿಸಿಕೊಟ್ಟ ವೈದ್ಯ ಹರಿಕೃಷ್ಣ ಸೋನಿ ಎಂಬಾತನನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಪತಿಗೆ ಅರಿವಿಲ್ಲದೆ ಮಹಿಳೆ 18.5 ಲಕ್ಷ ರೂ.ಗಳನ್ನು ಪಡೆಯಲು ಎರಡು ವಿಮಾ ಸಂಸ್ಥೆಗಳಿಗೆ ದಾಖಲೆಗಳನ್ನು ಸಲ್ಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.