ಇನ್ಮುಂದೆ ವಾಹನ ಸವಾರರು ಡಿಎಲ್, ಆರ್’ಸಿ ಬುಕ್ ಜತೆಗೆ ತೆಗೆದುಕೊಂಡು ಸಾಗಬೇಕಾದ ಜಂಜಾಟವಿಲ್ಲ; ಡಿಜಿಟಲ್ ದಾಖಲೆ ಜತೆಗಿದ್ದರೆ ಸಾಕು !
ಬೆಂಗಳೂರು : ಡಿಜಿಟಲ್ ಕ್ರಾಂತಿಯಲ್ಲಿ ಬೆಂಗಳೂರು ನಗರ ಪೊಲೀಸ್ ವಿಭಾಗವು ಮುಂದಿದ್ದು, ಇದೀಗ ವಾಹನ ಸವಾರರಿಗೆ ಡಿಎಲ್, ಆರ್’ಸಿ ಬುಕ್ ಇತ್ಯಾದಿ ದಾಖಲಾತಿಗಳಿಲ್ಲದೆ ರಸ್ತೆಗಿಳಿಯಲು ಅವಕಾಶ ಮಾಡಿಕೊಟ್ಟಿದೆ.
ಡಿಎಲ್, ಆರ್’ಸಿ ಬುಕ್ ಹೀಗೆ ಎಲ್ಲಾ ದಾಖಲಾತಿಗಳನ್ನು ತಮ್ಮಲ್ಲೇ ಇಟ್ಟುಕೊಂಡು ಹೋಗುವುದು ಕಷ್ಟಕರವಾಗಿತ್ತು. ಆ ದಾಖಲೆ ಪತ್ರಗಳನ್ನು ಕಳೆದುಕೊಳ್ಳದಂತೆ ಜಾಗ್ರತೆಯಾಗಿ ಇಟ್ಟುಕೊಳ್ಳುವುದು ಒಂದು ಸವಾಲಾಗಿತ್ತು. ಆದರೆ ಇದೀಗ ಡಿಜಿಟಲ್ ರೂಪದ ದಾಖಲೆಗಳನ್ನು ಹಾಜರುಪಡಿಸಲು ಸರ್ಕಾರ ಅವಕಾಶ ನೀಡಿದೆ. ಇನ್ನು ಮುಂದೆ ವಾಹನ ಸವಾರರು ಇದ್ಯಾವ ಕಾಗದಪತ್ರಗಳ ಹಂಗಿಲ್ಲದೆ ರಸ್ತೆಗಿಳಿಯಬಹುದು.
ವಾಹನ ಸವಾರರು ಡಿಜಿ ಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್ಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿಡಬೇಕು.
ಇನ್ನು ಮುಂದೆ ಪೊಲೀಸರ ತಪಾಸಣೆಯ ವೇಳೆ ವಾಹನ ಸವಾರರು ಡಿಜಿಟಲ್ ದಾಖಲೆಗಳನ್ನು ಪ್ರದರ್ಶನ ಮಾಡಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.
ಈ ಎರಡು ಅಪ್ಲಿಕೇಷನ್ನಲ್ಲಿ ಡಿಜಿಟಲ್ ರೂಪದಲ್ಲಿರುವ ದಾಖಲೆಗಳು ಸ್ವೀಕಾರಾರ್ಹ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಗಳು ಸ್ಪಷ್ಟಪಡಿಸಿವೆ.
ಅಧಿಕಾರಿಗಳು ಇ ಚಲನ್ ಆ್ಯಪ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಬಹುದು. ವಾಹನ ಸವಾರರು ಪ್ಲೇ ಸ್ಟೋರ್ನಲ್ಲಿ ಡಿಜಿ ಲಾಕರ್ ಮತ್ತು ಎಂಪರಿವಾಹನ್ ಡೌನ್ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆ ದಾಖಲಿಸಿ ಕೆವೈಸಿ ದಾಖಲಿಸಿ ನೋಂದಣಿ ಮಾಡಿಕೊಳ್ಳಬೇಕು.
ತದನಂತರ ನಿರ್ದಿಷ್ಟ ದಾಖಲೆಗಳನ್ನು ಡೌನ್ಲೋಡ್ ಹಾಗೂ ಸೇವ್ ಮಾಡಿಕೊಳ್ಳಬಹುದು. ಒಂದು ವೇಳೆ ವಾಹನ ಮಾಲೀಕರಲ್ಲದವರು ಇನ್ನೊಬ್ಬರ ಚಾಲನೆ ಮಾಡುತ್ತಿದ್ದರೆ, ಆಗ ವಾಹನದ ಮಾಲೀಕನ ಆ್ಯಪ್ನಿಂದ ದಾಖಲಾತಿಗಳನ್ನು ವರ್ಗಾವಣೆ ಮಾಡಿಕೊಂಡು ತಪಾಸಣೆ ವೇಳೆ ಹಾಜರುಪಡಿಸಬಹುದು. ಈ ರೀತಿಯ ಡಿಜಿಟಲೀಕರಣದಿಂದ ನಕಲಿ ದಾಖಲಾತಿಗಳನ್ನು ಬಳಸುವುದನ್ನು ತಪ್ಪಿಸಬಹುದು. ಹಾಗೆಯೇ ಇದು ಪೊಲೀಸ್ ಅಧಿಕಾರಿಗಳಿಗಳಿಗೂ ತಪಾಸಣೆಗೆ ಸೂಕ್ತ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.