ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ

ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಪಾಕಿಸ್ತಾನದ ಪೇಶಾವರದಲ್ಲಿ ಡಿಸೆಂಬರ್‌ 11, 1922 ರಲ್ಲಿ ಜನಿಸಿದ್ದ ಮಹಮ್ಮದ್‌ ಯೂಸೂಫ್‌ ಖಾನ್‌ ವಿಭಜನೆ ವೇಳೆ ಭಾರತಕ್ಕೆ ಬಂದಿದ್ದು ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡ ಬಳಿಕ ದಿಲೀಪ್‌ ಕುಮಾರ್‌ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದರು.

ಪತ್ನಿ ಸಾಯಿರಾಬಾನು ಜೊತೆ ಮುಂಬೈನಲ್ಲಿ ನೆಲೆಸಿದ್ದ ದಿಲೀಪ್‌ ಕುಮಾರ್‌ ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ಹಿರಿಯ ನಟನ ನಿಧನಕ್ಕೆ ಬಾಲಿವುಡ್‌ ಚಿತ್ರರಂಗ ಕಂಬನಿ ಮಿಡಿದಿದೆ.

1947ರಲ್ಲಿ ಬಿಡುಗಡೆಯಾದ ಜುಗ್ನು ಚಿತ್ರ ಜಯಪ್ರದವಾಯಿತು. ಬಳಿಕ ಅಂದಾಜ್ (1949), ದೀದಾರ್ (1951), ಆನ್ (1952), ಅಮರ್ (1954), ಆಜಾದ್ (1955), ದೇವದಾಸ್ (1955), ಮುಸಾಫಿರ್ (1957), ಮಧುಮತಿ (1958) ಮತ್ತು ಮುಘಲ್ ಎ ಆಜಮ್ (1960) ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವನ್ನು ಪಡೆಯಿತಲ್ಲದೆ, ದಿಲೀಪ್ ಕುಮಾರರೂ ಚಿತ್ರರಂಗದಲ್ಲಿ ಅಮೋಘ ಖ್ಯಾತಿಯನ್ನು ಪಡೆದರು. ಅಂದಾಜ್ , ದೀದಾರ್ , ಅಮರ್ , ದೇವದಾಸ್, ಮಧುಮತಿ, ಇತ್ಯಾದಿ ಚಿತ್ರಗಳು ಶೋಕರಸಭರಿತ ಚಿತ್ರಗಳಾಗಿದ್ದು, ದಿಲೀಪ್ ಕುಮಾರರು ದುರಂತ ನಾಯಕನೆಂಬ ಬಿರುದನ್ನು ಪಡೆದರು.

ಬಾಲಿವುಡ್ ನಲ್ಲಿ ತಮ್ಮ ಕಾಲದ ಅತೀ ಶ್ರೇಷ್ಠ ನಟರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗುತ್ತದೆ. 1994 ರಿಂದ 1996 ರವರೆಗೆ ಸುಮಾರು  61 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಅಭಿನಯಕ್ಕೆ ಅನೇಕ ಪ್ರಶಸ್ತಿಗಳು ದೊರೆತಿವೆ. ಇವರು ಭಾರತೀಯ ಚಲನಚಿತ್ರ ರಂಗದ ಸರ್ವೋಚ್ಚ ಸನ್ಮಾನವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ಅವರು ಭಾರತದ ರಾಜ್ಯಸಭೆಯ ಸದಸ್ಯರೂ ಆಗಿದ್ದರು.

Leave A Reply

Your email address will not be published.