ಬ್ಯಾಟ್ ಯಾವಾಗಲು ನೆರೆಮನೆಯಾತನ ಹೆಂಡತಿಯಂತೆ, ಪ್ರತಿಯೊಬ್ಬ ಕ್ರಿಕೆಟಿಗನು ಇನ್ನೊಬ್ಬರ ಬ್ಯಾಟಲ್ಲಿ ಆಡಲು ಇಷ್ಟಪಡುತ್ತಾನೆ | ಸೆಕ್ಸಿಸ್ಟ್ ಕಾಮೆಂಟ್ ಮಾಡಿದ ದಿನೇಶ್ ಕಾರ್ತಿಕ್
ನವದೆಹಲಿ: ಪ್ರತಿಯೊಬ್ಬ ಕ್ರಿಕೆಟಿಗನು ಇನ್ನೊಬ್ಬರ ಬ್ಯಾಟನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದೊಂತರ ನೆರೆಮನೆಯಾತನ ಹೆಂಡತಿ ಇದ್ದಂತೆ ಎಂದು ಹೇಳಿದ್ದ ಕಮೆಂಟೇಟರ್ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ.
ಟೀಮ್ ಇಂಡಿಯಾ ಅವಕಾಶವಂಚಿತ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ಇತ್ತೀಚೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ವೀಕ್ಷಕ ವಿವರಣೆ ನೀಡುವ ಮೂಲಕ ಗಮನ ಸೆಳೆದಿದ್ದರು.
ಮೊದಲ ಪ್ರಯತ್ನದಲ್ಲೇ ವೀಕ್ಷಕ ವಿವರಣೆ ನೀಡುವುದರಲ್ಲಿ ಸೈ ಎನಿಸಿಕೊಂಡಿದ್ದ ಕಾರ್ತಿಕ್ ಹಲವರಿಂದ ಮೆಚ್ಚುಗೆಯನ್ನೂ ಗಿಟ್ಟಿಸಿಕೊಂಡಿದ್ದರು.
ಕಾರ್ತಿಕ್ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಕಾರ್ತಿಕ್ ನೀಡಿರುವ ಸೆಕ್ಸಿಸ್ಟ್ ಕಾಮೆಂಟ್ ಭಾರಿ ವಿವಾದವನ್ನೇ ಸೃಷ್ಟಿಸಿದ್ದು, ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಜಾಡಿಸಿದ್ದಾರೆ.
“ಬ್ಯಾಟ್ಸ್ಮನ್ಗಳಿಗೆ ಅವರ ಬ್ಯಾಟ್ ಇಷ್ಟವಾಗುವುದಿಲ್ಲ. ಹೀಗಾಗಿ ಬ್ಯಾಟ್ಗಳು ಒಬ್ಬರಿಂದ ಒಬ್ಬರ ಕೈ ಸೇರಿರುತ್ತದೆ. ಬಹುತೇಕ ಬ್ಯಾಟ್ಸ್ಮನ್ಗಳಿಗೆ ತಮ್ಮ ಬ್ಯಾಟ್ ಇಷ್ಟವಾಗುವುದೇ ಇಲ್ಲ. ಮತ್ತೊಬ್ಬ ಬ್ಯಾಟ್ಸ್ಮನ್ನ ಬ್ಯಾಟ್ ಮೇಲೆ ಅವರಿಗೆ ಹೆಚ್ಚು ಪ್ರೀತಿ. ಬ್ಯಾಟ್ಗಳು ಪಕ್ಕದ ಮನೆಯವನ ಹೆಂಡತಿ ಇದ್ದಹಾಗೆ. ಸದಾ ಅವರೇ ಹೆಚ್ಚು ಪ್ರಿಯವಾಗುವುದು,” ಎಂದು ಕಾಮೆಂಟರಿ ವೇಳೆ ಕಾರ್ತಿಕ್ ಮೈಮರೆತು ವಿವಾದಾತ್ಮಕ ಮಾತುಗಳನ್ನು ಆಡಿದ್ದರು.
ಕಾರ್ತಿಕ್ ಅವರ ಈ ಸೆಕ್ಸಿಸ್ಟ್ ಕಾಮೆಂಟ್ಗೆ ಕೂಡಲೇ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಟೀಕೆ ಹರಿದುಬಂದಿದೆ. ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಮೂರನೇ ಪಂದ್ಯದ ವೇಳೆ ಲೈವ್ನಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕ್ಷಮೆ ಕೇಳಿದ್ದಾರೆ.
ಆ ರೀತಿಯ ಮಾತುಗಳನ್ನು ಆಡಿದ ನಂತರ ಅವರಿಗೆ ಅವರ ತಾಯಿ ಮತ್ತು ಮಡದಿ (ದೀಪಿಕಾ ಪಳ್ಳಿಕಲ್) ಸಿಕ್ಕಾಪಟ್ಟೆ ಬೈದು ಬುದ್ದಿ ಹೇಳಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ.
” ನೀವು ಕೂಡ ಬೇರೆಯವರ ಬ್ಯಾಟ್ ನಲ್ಲಿ ಆಡಲು ಖುಷಿಪಡುತ್ತೀರಾ ? ನೀವೂ ಆ ಟೈಪಾ ? ” ಎಂದು ಸೋಶಿಯಲ್ ಮೀಡಿಯಾ ಕಾರ್ತಿಕ್ ನನ್ನು ಕೆಣಕುತ್ತಿದೆ. ಮನೆಯಲ್ಲಿ ದೀಪಿಕಾ ಪಲ್ಲಿಕಲ್ ಕಾರ್ತಿಕ್ ಮೇಲೆ ಬ್ಯಾಟ್ ಬೀಸಿದ ಸದ್ದು ಪಕ್ಕದ ಅಪಾರ್ಟ್ಮೆಂಟ್ ವರೆಗೆ ಕೇಳಿಸಿದೆಯಂತೆ.