ಮದುವೆ ಆದರೆ ಬೇರೆ ಬೇರೆ ಮನೆಗೆ ಹೋಗಿ ತಾವು ಪರಸ್ಪರ ದೂರ ಆಗುತ್ತೇವೆಂದು ನೊಂದುಕೊಂಡ ಅವಳಿ ಸೋದರಿಯರ ಆತ್ಮಹತ್ಯೆ
ಮಂಡ್ಯ: ವಿನಾಕಾರಣ ದುಡುಕಿ ಇಬ್ಬರು ಸಹೋದರಿಯರು ಸಹ-ನಿರ್ಗಮನ ಮಾಡಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೇ ಸಾಯಲು ನಿರ್ಧರಿಸಿ ತಮ್ಮನ್ನು ತಾವು ಕೊಂದುಕೊಂಡಿದ್ದಾರೆ. ಆದ್ರೆ ಆ ಸಾವಿಗೆ ಇರುವ ಕಾರಣ ಕೇಳಿದರೆ ಹೀಗೂ ಮಾಡ್ಕೋತಾರ ಎಂದನ್ನಿಸಿ, ಮನಸ್ಸಿನಲ್ಲಿ ವಿಷಾಧ ಮೂಡದೇ ಇರದು.
ನಾವು ಬೇರೆ ಬೇರೆ ಮನೆಗೆ ಮದುವೆಯಾಗಿ ಹೋದರೆ ಪರಸ್ಪರ ದೂರ ಆಗುತ್ತೇವೆಂದು ಮನನೊಂದು ಈ ಅವಳಿ ಸಹೋದರಿಯರು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣದ ಹುಣಸನಹಳ್ಳಿ ಗ್ರಾಮದ ಸುರೇಶ್ ಮತ್ತು ಯಶೋಧ ದಂಪತಿ ಪುತ್ರಿಯರಾದ ದೀಪಿಕಾ(19) ಮತ್ತು ದಿವ್ಯ(19) ಎಂಬ ಅವಳಿ ಸಹೋದರಿಯರು ಚಿಕ್ಕಂದಿನಿಂದ ಬಹಳ ಆನೋನ್ಯತೆಯಿಂದ ಇದ್ದರು. ಹುಟ್ಟುತ್ತಲೇ ಜೊತೆಯಾಗಿ ಭೂಮಿಗೆ ಬಂದ ಅವರು, ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ಅವರಿಬ್ಬರ ಇಷ್ಟಾನಿಷ್ಟಗಳು ಒಂದೇ ಆಗಿದ್ದುವು. ಹೀಗೆ ಜೊತೆಯಾಗಿ ಹುಟ್ಟಿ ಜೊತೆಯಾಗಿ ಬೆಳೆದ ಮಕ್ಕಳಿಗೆ ಮದುವೆ ಮಾಡಿಸಲು ಪೋಷಕರು ನಿರ್ಧರಿಸಿದ್ದಾರೆ.
ಇಬ್ಬರು ಪುತ್ರಿಯರನ್ನು ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ಮದುವೆಗೆ ಸಿದ್ಧತೆ ಮಾಡಿಕೊಂಡದ್ದನ್ನು ಅರಿತ ಈ ಸಹೋದರಿಯರು ಬೇಜಾರಾಗಿದ್ದಾರೆ. ತಾವಿಬ್ಬರೂ ಬೇರೆ ಬೇರೆ ಮನೆಗೆ ಮದುವೆಯಾದರೆ ತಮ್ಮ ಬಾಂಧವ್ಯ ಈಗ ಇರುವ ಹಾಗೆ ಉಳಿಯಲ್ಲ. ಜೀವನ ಪರ್ಯಂತ ನಾವು ಜತೆಗಿರಬೇಕು ಎಂದು ಅವರು ಅಂದುಕೊಂಡಿದ್ದಾರೆ.
ಆದರೆ ವಾಸ್ತವದಲ್ಲಿ ಅದು ಹೇಗೆ ತಾನೇ ಸಾಧ್ಯ. ಅದು ಕಷ್ಟ ಸಾಧ್ಯ ಎಂದರಿತ ಬಾಲಿಕೆಯರು ತಮ್ಮ ಬಾಂಧವ್ಯ ಇನ್ನೇನು ಕೊನೆಯಾಗುತ್ತದೆ, ಅದಕ್ಕಿಂತ ನಾವು ಜೊತೆಗೆ ಸೇರಿ ಹುಟ್ಟಿದ್ದೇವೆ ಜೊತೆಗೆ ಸಾಯೋಣ ಎಂದು ನಿರ್ಧರಿಸಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.