ಧರ್ಮಸ್ಥಳ, ಉಡುಪಿ, ಪುತ್ತೂರು, ಸುಬ್ರಮಣ್ಯ ದೇಗುಲಗಳಲ್ಲಿ ನಾಳೆ ಏನೆಲ್ಲಾ ಸೇವೆಗಳು ಇವೆ, ಇರಲ್ಲ – ಇಲ್ಲಿದೆ ಡೀಟೇಲ್ಸ್ !!
ಜುಲೈ,4 : ದಕ್ಷಿಣ ಕನ್ನಡ ಜಿಲ್ಲೆಯ ಇತರ ಪ್ರಮುಖ ದೇವಾಲಯಗಳು ಕೂಡಾ ನಾಳೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿವೆ.ಯಾವ ದೇವಾಲಯಗಳಲ್ಲಿ ಸೇವೆಗಳು, ದರ್ಶನ ಸಮಯಗಳು ಹೇಗಿವೆ ಎಂಬುವದರ ಸಂಪೂರ್ಣ ಚಿತ್ರಣ ಇಲ್ಲಿದೆ.
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ
ನಾಳೆಯಿಂದ ಧರ್ಮಸ್ಥಳದಲ್ಲಿ ಲಾಕ್ ಡೌನ್ ಪೂರ್ವ ರೀತಿಯಲ್ಲಿ ಎಲ್ಲರೀತಿಯ ಸೇವೆಗಳು ಸಿಗಲಿವೆ. ಆರತಿ ಇರಲಿದ್ದು ತೀರ್ಥ ಇರುವುದಿಲ್ಲ. ಆದರೆ ಎಲ್ಲ ರೀತಿಯ ಪ್ರಸಾದ ದೊರೆಯಲಿದೆ.
ಬೆಳಿಗ್ಗೆ 6ರಿಂದ 11 ರವರೆಗೆ, ಮಧ್ಯಾಹ್ನ 12 ಗಂಟೆ 1 ಗಂಟೆವರೆಗೆ, ಸಂಜೆ 7ರಿಂದ 8.30 ವರೆಗೆ ದರ್ಶನ ಅವಕಾಶವಿದೆ.
ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ದೇವರ ದರ್ಶನಕ್ಕೆ ಅವಕಾಶವಿದೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗುವವರು ದೇವಸ್ಥಾನದ ಬಳಿ ಇರುವ ಪ್ರವಚನ ಮಂಟಪದಲ್ಲಿ ಹೆಸರು ನೋಂದಾಯಿಸಬೇಕು. ಹೆಗ್ಗಡೆಯವರ ಭೇಟಿಯ ಸಮಯ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ, ಸಂಜೆ 4 ಗಂಟೆಯಿಂದ 5ರವರೆಗೆ ವಸತಿ ಸೌಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ದೇವಳ ಕಚೇರಿ: 08256-266666/ 9449567232 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಾಲಯನಲ್ಲಿ
ಅನ್ ಲಾಕ್ 3.0 ನಾಳೆಯಿಂದ ಸಡಿಲಕೊಂಡ ಕಾರಣ ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿತ್ಯ ಪೂಜೆಯ ಜೊತೆಗೆ ಮಂಗಳಾರತಿ ಹಾಗೂ ಆರತಿ ಪಡೆಯಲು ಅವಕಾಶವಿದೆ. ತೀರ್ಥ ಇರುವುದಿಲ್ಲ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಿನಾಂಕ 05-07-2021 ರಿಂದ ಸರಕಾರದಿಂದ ಮುಂದಿನ ಬರುವವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನಕ್ಕೆ ಸೀಮಿತ ದರ್ಶನ ಮತ್ತು ಸೇವೆಗೆ ಅವಕಾಶ ಕಲ್ಪಿಸಲಾಗಿದೆ.
ದೇವಳದಲ್ಲಿ ಶ್ರೀ ದೇವರ ದರ್ಶನದ ಸಮಯವನ್ನು ಬೆಳಗ್ಗೆ ಗಂಟೆ 7.00 ರಿಂದ ಮಧ್ಯಾಹ್ನ ಗಂಟೆ 11.30 ರ ವರೆಗೆ ನಿಗದಿ ಮಾಡಲಾಗಿದ್ದು, ಗಂಟೆ 12.15 ರಿಂದ 1.30 ರ ವರೆಗೆ ಮಧ್ಯಾಹ್ನದ ದರ್ಶನಕ್ಕೆ ಹಾಗೂ ಅಪರಾಹ್ನ ಗಂಟೆ 2.30 ರಿಂದ ಸಾಯಂಕಾಲ ಗಂಟೆ 6.30 ರ ವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಕ್ತಾದಿಗಳಿಗೆ ಶ್ರೀ ದೇವಳದಲ್ಲಿ ಪ್ರಸ್ತುತ ಮಂಗಳಾರತಿ ಸೇವೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದಂತೆ ಯಾವ ಸೇವೆಗಳು ಕೂಡಾ ಇರುವುದಿಲ್ಲ.ಮಂಗಳಾರತಿ ಮಾಡಲಿಚ್ಚಿಸುವ ಭಕ್ತಾದಿಗಳು ಶ್ರೀ ದೇವಳದ ಸೇವಾ ಕೌಂಟರ್‌ಗಳಲ್ಲಿ ರೂ. 5ರ ಸೇವಾ ಶುಲ್ಕ ಪಾವತಿಸಿ ರಶೀದಿಗಳನ್ನು ಪಡೆದುಕೊಂಡು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.
ಸುಬ್ರಮಣ್ಯ ದೇವಾಲಯದಲ್ಲಿ ಯಾವುದೇ ಪ್ರಸಾದಗಳ ವಿತರಣೆಯು ಕೂಡಾ ಸದ್ಯಕ್ಕೆ ಇಲ್ಲ, ಹಾಗೂ ಹೊರ ಜಿಲ್ಲೆಗಳಿಂದ ಬರುವ ಭಕ್ತ ಸಮೂಹಕ್ಕೆ ಕ್ಷೇತ್ರದಲ್ಲಿ ತಂಗಲು ಶ್ರೀ ದೇವಳದ ವತಿಯಿಂದ ಇರುವ ಯಾವುದೇ ವಸತಿ ಸೌಲಭ್ಯದ ಅವಕಾಶಗಳಿರುವುದಿಲ್ಲ
ಈ ನಡುವೆ ಉಡುಪಿಯ ಶ್ರೀಕೃಷ್ಣ ಮಠ ಒಂದು ವಾರಗಳ ಕಾಲ ತೆರೆಯುವುದಿಲ್ಲ ಎಂಬುವುದು ತಿಳಿದು ಬಂದಿದೆ.
ಆದರೆ ಇದರ ಬಗ್ಗೆ ಮಾತನಾಡಿದ ಉಡುಪಿಯ ಸ್ವಾಮೀಜಿ ಪರ್ಯಾಯ ಅದಮಾರು ಈಶಪ್ರೀಯ ತೀರ್ಥ ಶ್ರೀಪಾದರು ” ಒಂದು ವಾರ ಕೃಷ್ಣ ಮಠ ಭಕ್ತರಿಗೆ ತೆರೆಯೋದಿಲ್ಲ. ವಾರದ ನಂತರ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆಯನ್ನು ಮಾಡುತ್ತೇವೆ. ರಾಜ್ಯದ ಚಿತ್ರಣ ನೋಡಿಕೊಂಡು ಆನಂತರ ಇದರ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.