ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಸಡಿಲಿಕೆ ಶೀಘ್ರ | ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ಎಲ್ಲಾ ಓಪನ್ – ನಾಳೆ ಅಧಿಕೃತ ಆದೇಶ ಸಾಧ್ಯತೆ
ಬೆಳ್ತಂಗಡಿ : ದಕ್ಷಿಣ ಕನ್ನಡಡಲ್ಲಿ ಮತ್ತಷ್ಟು ಲಾಕ್ ಡೌನ್ ಸಡಿಲಿಕೆಗೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡುವ ಸಾಧ್ಯತೆಯಿದೆ.
ಈ ಬಗ್ಗೆ ನಾಳೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬರಲಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಮಾತನಾಡಲಾಗಿದೆ. ನಾವು ವಿನಂತಿ ಮಾಡಿದ್ದೇವೆ. ನಾಳೆ, ಗುರುವಾರ ಈ ಬಗ್ಗೆ ಸರಕಾರದ ಅಧಿಕೃತ ಆದೇಶ ಬರುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೊಕ್ಕಡದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದೀಗ ಕೊರೋನ ಪಾಸಿಟಿವಿಟಿ ರೇಟ್ ಕೂಡ ನಿಯಂತ್ರಣಕ್ಕೆ ಬಂದು, ಕಡಿಮೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಹಾಗೂ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಿ ಲಾಕ್ಡೌನ್ ಸಡಿಲಿಕೆ ಮಾಡಲಾಗುವುದು. ಈ ಬಗ್ಗೆ ಈಗಾಗಲೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಇಂದು ಸಂಜೆ ಅಥವಾ ಗುರುವಾರ ಅಧಿಕೃತ ಆದೇಶ ಹೊರಬೀಳಲಿದೆ ಎಂದವರು ತಿಳಿಸಿದರು. ಮತ್ತೆ ನಿಧಾನಕ್ಕೆ ಸಹಜ ಸ್ಥಿತಿಗೆ ಮರಳಲು ಜನ ತುದಿಗಾಲಿನಲ್ಲಿ ನಿಂತಿದ್ದಾರೆ. ಈಗ ಇರುವ ಮಧ್ಯಾಹ್ನದ 2 ಗಂಟೆಯಿಂದ 5 ಗಂಟೆಗೆ ವಿಸ್ತರಿಸುವ ಮೂಲಕ ಮತ್ತೆ 3 ಗಂಟೆಗಳ ಹೆಚ್ಚುವರಿ ಸಮಯ ವ್ಯವಹಾರಕ್ಕೆ ಸಿಗುತ್ತಿದೆ. ಹಾಗಾಗಿ ಸಚಿವರ ಇವತ್ತಿನ ಹೇಳಿಕೆ ಜನರಲ್ಲಿ ಮತ್ತು ವ್ಯಾಪಾರಸ್ಥರಲ್ಲಿ ಒಂದು ಖುಷಿಯ ನಿಟ್ಟುಸಿರು ಮೂಡಿಸಿದೆ.