ಟ್ವಿಟರ್ ನಲ್ಲಿ ಭಾರತದ ನಕ್ಷೆಯ ತಪ್ಪಾದ ಚಿತ್ರಣ | ಈ ಬಗ್ಗೆ ಭಾರತದ ಟ್ವಿಟರ್ ಎಂ.ಡಿ ಮನೀಶ್ ಮಹೇಶ್ವರಿ ಅವರ ವಿರುದ್ಧ ಪ್ರಕರಣ ದಾಖಲು
ನವದೆಹಲಿ: ಭಾರತದ ತಪ್ಪು ನಕ್ಷೆಯನ್ನು ಟ್ವಿಟರ್ ನ ಕೆರಿಯರ್ ವೆಬ್ಪೇಜ್ ನಲ್ಲಿ ಪ್ರದರ್ಶಿಸಿದಕ್ಕಾಗಿ ಭಾರತದ ಎಂಡಿ ಮನೀಶ್ ಮಹೇಶ್ವರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬುಲಂದ್ ಶಹರ್ ನಲ್ಲಿ ಬಜರಂಗದಳದ ನಾಯಕರೊಬ್ಬರು ನೀಡಿದ ದೂರಿನ ಮೇರೆಗೆ, ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 505 (2) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008 ರ ಸೆಕ್ಷನ್ 74 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತದ ನಕ್ಷೆಯನ್ನು ತಪ್ಪಾಗಿ ರೂಪಿಸುವ ಮೂಲಕ ಈ ಹಿಂದೆಯೇ ಟೀಕೆಗೆ ಗುರಿಯಾಗಿದ್ದ ಟ್ವಿಟ್ಟರ್, ಈ ಬಾರಿಯೂ ಅದೇ ಉದ್ಧಟತನ ಮೆರೆದಿದ್ದು, ಮತ್ತೆ
ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರತ್ಯೇಕ ದೇಶವೆಂದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಟ್ವಿಟರ್ ಬಳಕೆದಾರರ ಕುಂದುಕೊರತೆಗಳನ್ನು ನಿವಾರಿಸಲು ನೇಮಕಗೊಂಡಿದ್ದ ಧರ್ಮೇಂದ್ರ ಚತುರ್ ರಾಜೀನಾಮೆ ಬೆನ್ನಲ್ಲೇ, ಈ ಸ್ಥಾನಕ್ಕೆ ಕ್ಯಾಲಿಫೋರ್ನಿಯಾ ಮೂಲದ ಟ್ವಿಟರ್ ಜಾಗತಿಕ ಕಾನೂನು ನೀತಿ ನಿರ್ದೇಶಕ ಜೆರಮಿ ಕೆಸೆಲ್ ರನ್ನು ಸಂಸ್ಥೆ ನೇಮಿಸಿದೆ. ಸಂಸ್ಥೆ ಭಾರತದಲ್ಲಿ ನೇಮಿಸುವ ಎಲ್ಲಾ ನೋಡಲ್ ಅಧಿಕಾರಿಗಳು ಭಾರತೀಯರೇ ಆಗಿರಬೇಕೆಂಬ ನೂತನ ನಿಯಮವಿದ್ದರೂ ಇದಕ್ಕೆ ವಿರುದ್ಧವಾಗಿ ಅಧಿಕಾರಿಯನ್ನು ನೇಮಿಸಿತು ನಿಯಮ ಉಲ್ಲಂಘಿಸಿದೆ.
ಕೆಲದಿನಗಳ ಹಿಂದೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ರವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಿ, ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಮತ್ತೆ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸುತ್ತಿದೆ.
ಈಗಾಗಲೇ ಭದ್ರತೆ ಸಂಬಂಧಿಸಿದಂತೆ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ರೂಪಿಸಿರುವ ನೂತನ ನಿಯಮಗಳನ್ನು ಪಾಲಿಸಲು ನಕಾರ ಮಾಡುವ ಮೂಲಕ ಟ್ವಿಟರ್ ಭಾರತ ಸರ್ಕಾರದ ವಿರುದ್ಧದ ನಡೆ ಪಾಲಿಸುತ್ತಿದೆ ಈ ಬೆನ್ನಲ್ಲೇ ಭೂಪಟವನ್ನು ತಪ್ಪಾಗಿ ಚಿತ್ರಿಸುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಹಾಕಿಕೊಂಡಿದೆ.
ಇದೇ ರೀತಿ ಪದೇಪದೇ ಒಂದಿಲ್ಲೊಂದು ರೀತಿಯಲ್ಲಿ ಭಾರತ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಟ್ವಿಟರ್, ಈಗ ತನ್ನ ಎಂ.ಡಿ ಮೇಲೆ ದಾಖಲಾದ ಪ್ರಕರಣದ ಕುರಿತು ಹೇಗೆ ಹೋರಾಡಲಿದೆ ಎಂಬುದು ಇನ್ನಷ್ಟೇ ತಿಳಿಯಲಿದೆ.