ಬೆಳ್ತಂಗಡಿ | ನಗ್ನ ವಿಡಿಯೋ ಕಾಲ್ ಮಾಡಿದ ಮಹಿಳೆ | ಉಜಿರೆಯ ಉಪನ್ಯಾಸಕರೊಬ್ಬರಿಗೆ ಹಣಕ್ಕಾಗಿ ಬ್ಲಾಕ್ ಮೇಲ್ !
ಒಂದೆಡೆ ಆನ್ಲೈನ್ ವಂಚನೆ ಅವ್ಯಾಹತವಾಗಿ ನಡೆಯುತ್ತಿರುವಂತೆ, ಮತ್ತೊಂದೆಡೆ ನಗ್ನ ವೀಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡಿ ದುಡ್ಡು ಮಾಡುವ ಕೆಲಸ ನಿರಂತರವಾಗಿ ನಡೆದಿದೆ.
ಇಲ್ಲೇ ಪಕ್ಕದಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಸಮೀಪ ಉಪನ್ಯಾಸಕರೊಬ್ಬರಿಗೆ ಇದೇ ರೀತಿ ವೀಡಿಯೋ ಕಾಲ್ ಮಾಡಿ ಇದೀಗ ಬ್ಲಾಕ್ಮೇಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಮೊದಲು ಸದರಿ ಶಿಕ್ಷಕರಿಗೆ ಫೇಸ್ಬುಕ್ನಲ್ಲಿ ರಿಕ್ವೆಸ್ಟ್ ಬಂದಿತ್ತು. ಯಾರು ಎತ್ತ ಎಂದು ಗಮನಿಸದೆ ವಿಕಾಸ್ ( ಹೆಸರು ಬದಲಿಸಿದೆ) ಅವರು ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದರು. ಆ ನಂತರ, ಯಾವುದೋ ಬ್ಯುಸಿನೆಸ್ ಅವಕಾಶ ಇದೆ, ವಿವರ ತಿಳಿಸುತ್ತೇನೆ ಎಂದು ಆ ಹುಡುಗಿ ವಾಟ್ಸ್ ಆ್ಯಪ್ ನಂಬರ್ ಪಡೆದಿದ್ದಳು.
ಸ್ವಲ್ಪ ಸಮಯದ ನಂತರ ಅವರಿಗೆ ವಿಡಿಯೋ ಕಾಲ್ ಒಂದು ಬಂದಿತ್ತು. ತಮ್ಮ ಕೆಲಸದ ಮಧ್ಯೆ ಆಯಾಚಿತವಾಗಿ ಅವರು ಕರೆ ಸ್ವೀಕರಿಸಿದ್ದರು. ಮತ್ತೆ ಕೆಲವು ಕ್ಷಣಗಳಲ್ಲಿ ಅತ್ತಕಡೆಯಿಂದ ಆ ಹುಡುಗಿ ನಗ್ನಳಾಗಿ ಕಾಣಿಸಿಕೊಂಡಿದ್ದಳು. ಇದೇನಾಗುತ್ತಿದೆ ಎಂದು ಗಾಬರಿಗೊಂಡ ಉಪನ್ಯಾಸಕರು ತಕ್ಷಣ ಕರೆ ಕಟ್ ಮಾಡಿದ್ದಾರೆ. ಆದರೆ ಅಷ್ಟರ ಒಳಗೆ ಆಕೆ ಮತ್ತವಳ ತಂಡ ಸ್ಕ್ರೀನ್ ಶಾಟ್ ತೆಗೆದುಕೊಂಡು ಅದನ್ನು ಅವರ ಭಾವಚಿತ್ರಕ್ಕೆ ಜೋಡಿಸಿ ಬ್ಲಾಕ್ ಮೇಲ್ ಶುರುಮಾಡಿದ್ದರು.
“ನಿಮ್ಮ ಈ ನಗ್ನ ಹುಡುಗಿಯ ಜತೆಗಿನ ಫೋಟೋ ವಿಡಿಯೋ ಇದೀಗ ಫೇಸ್ಬುಕ್, ಯೂಟ್ಯೂಬ್ ಇನ್ಸ್ಟಾಗ್ರಾಮ್ ಮುಂತಾದ ಹಲವು ಸೋಶಿಯಲ್ ಮೀಡಿಯಾ ಗಳಿಗೆ ಅಪ್ ಲೋಡ್ ಆಗುತ್ತಿದೆ. ಅಪ್ಲೋಡ್ ನಿಲ್ಲಿಸಲು 5500 ರೂಪಾಯಿ ಚಾರ್ಜ್ ಆಗುತ್ತೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಈ ವಿಷಯ ತಿಳಿದರೆ ನಿಮ್ಮ ಅಪ್ಪ-ಅಮ್ಮ ಸತ್ತುಹೋಗುತ್ತಾರೆ. ನಿನ್ನ ಕುಟುಂಬಸ್ಥರು ಫಿನಿಶ್. ಬೇಗ ದುಡ್ಡು ಹಾಕಿ ಆನಂತರ ವಿಡಿಯೋ ಡಿಲೀಟ್ ಮಾಡುತ್ತೇನೆ ಎಂದಿದೆ ಆ ತಂಡ.
ಆ ಕೂಡಲೇ ಉಪನ್ಯಾಸಕರು ತಮ್ಮ ಗೆಳೆಯರನ್ನು ಮತ್ತು ಪರಿಚಯ ಇರುವ ಮಾಧ್ಯಮ ಸ್ನೇಹಿತರಿಗೆ ವಿಷಯ ತಲುಪಿಸಿದ್ದರು. ಕೊನೆಗೆ ಯಾವುದೇ ಕಾರಣಕ್ಕೂ ಭಯಪಡದೆ, ಅಂತಹಾ ದುಷ್ಕರ್ಮಿಗಳಿಗೆ ದುಡ್ಡು ಕೊಡುವುದಿಲ್ಲ ಎಂದು ಆ ಉಪನ್ಯಾಸಕರು ನಿರ್ಧರಿಸಿದ್ದು, ಅದು ಶ್ಲಾಘನೀಯ ಬೆಳವಣಿಗೆ.
ಜಿಅಪರಿಚಿತರ ಜತೆ ವ್ಯವಹಾರ ಮತ್ತು ಚಾಟ್ ನಡೆಸುವಾಗ ಜಾಗೃತರಾಗಿ ಇರಬೇಕು. ಭಯಪಡದೆ ತಕ್ಷಣ ತಮ್ಮ ಗೆಳೆಯರಿಗೆ ವಿಚಾರ ತಿಳಿಸಬೇಕು. ಅಥವಾ ಸೈಬರ್ ಕ್ರೈಮ್ ಪೊಲೀಸರಿಗೆ ಫೋನ್ ಮೂಲಕ ಕೂಡಾ ದೂರು ನೀಡಬಹುದು. ನಗ್ನತೆ, ಸೆಕ್ಸ್ ಮುಂತಾದ ವಿಷಯ ದಲ್ಲಿ ಬ್ಲಾಕ್ ಮೇಲ್ ಮಾಡಿದಾಗ
ಕಂಗಾಲಾಗಿ ಬ್ಲಾಕ್ ಮೆಲರ್ ಗೆ ದುಡ್ಡು ಕಳಿಸಿ, ಮತ್ತಷ್ಟು ದುಡ್ಡಿಗೆ ಬೇಡಿಕೆ ಬರುವಂತೆ ಮಾಡಿಕೊಳ್ಳಬಾರದು ಎನ್ನುವುದು ಇವತ್ತು ನಾವು ಈ ಉಪನ್ಯಾಸಕರಿಂದ ಕಲಿಯುವ ಪಾಠ.