ತಾನು ಜ್ಯೂಸ್ ಮಾರುತ್ತಿದ್ದ ಊರಿಗೇ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡ ಯುವತಿ | ಈಕೆಯ ಸಾಧನೆ ಎಲ್ಲರಿಗೂ ಸ್ಪೂರ್ತಿ
ತಾನು ಜ್ಯೂಸ್ ಹಾಗೂ ಐಸ್ ಕ್ರೀಮ್ ಗಳನ್ನು ಮಾರುತ್ತಿದ್ದ ಊರಿಗೆ ಯುವತಿಯೊಬ್ಬಳು ಸಬ್ ಇನ್ ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾದ ಎಲ್ಲರಿಗೂ ಸ್ಫೂರ್ತಿಯಾಗಬಲ್ಲ ಘಟನೆ ಕೇರಳದ ವರ್ಕಳ ಎಂಬಲ್ಲಿ ನಡೆದಿದೆ.
ಕೇರಳದ ವರ್ಕಳ ಎಂಬ ಊರಲ್ಲಿರುವ ಶಿವಗಿರಿ ಆಶ್ರಮ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರಿಗೆ ಜ್ಯೂಸ್ ,ಐಸ್ ಕ್ರೀಂ ಮಾರುತ್ತಿದ್ದ ಆನಿ ಶಿವ ಎಂಬ ಯುವತಿ ಅದೇ ಊರಿಗೆ ಎಸೈ ಆಗಿ ಬಂದಿದ್ದಾರೆ.
ಜೂನ್ 25ರಂದು ವರ್ಕಳ ಪೊಲೀಸ್ ಠಾಣೆಗೆ ಸಬ್ ಇನ್ ಸ್ಪೆಕ್ಟರ್ ಆಗಿ 31ರ ಹರೆಯದ ಆನಿ ಶಿವ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
31 ವರ್ಷದ ಆ್ಯನಿ, ಕಾಂಜಿರಾಮ್ಕುಲಂ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ಓದುವ ಸಮಯದಲ್ಲಿ ತನ್ನ ಮನೆಯವರ ವಿರೋಧ ಕಟ್ಟಿಕೊಂಡು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಿದ್ದರು.
ಆದರೆ ಒಂದು ಮಗುವಾದ ಬಳಿಕ ಗಂಡ ದೂರವಾಗಿದ್ದ. ಬಳಿಕ ಮನೆಗೆ ಮರಳಲು ಪ್ರಯತ್ನಿಸಿದರೂ, ಕುಟುಂಬವು ಅವಳನ್ನು ಸ್ವೀಕರಿಸಲಿಲ್ಲ. ತನ್ನ ಆರು ತಿಂಗಳ ಮಗ ಶಿವಸೂರ್ಯನೊಂದಿಗೆ ಅಜ್ಜಿಯ ಮನೆಯಲ್ಲಿ ಶೆಡ್ ಒಂದರಲ್ಲಿ ಕೆಲ ಕಾಲ ಉಳಿದುಕೊಂಡಿದ್ದಳು. ಬಳಿಕ ಆದಾಯಕ್ಕಾಗಿ ಕೆಲಸ ಮಾಡಬೇಕು ಎಂದು ಅಲ್ಲಿಂದ ವರ್ಕಲಾಗೆ ತೆರಳಿದ್ದಳು.
“10 ವರ್ಷಗಳ ಹಿಂದೆ ವರ್ಕಳದ ಶಿವಗಿರಿಗೆ ಬರುತ್ತಿದ್ದ ಯಾತ್ರಾರ್ಥಿಗಳಿಗೆ ಲೆಮನ್ ಜ್ಯೂಸ್, ಐಸ್ ಕ್ರೀಮ್ ಗಳನ್ನು ಮಾರುತ್ತಿದ್ದೆನೋ, ಅದೇ ಸ್ಥಳಕ್ಕೆ ಇದೀಗ ಸಬ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದೇನೆ. ನಾನು ಇದಕ್ಕಿಂತ ಉತ್ತಮವಾಗಿ ನನ್ನ ನಿನ್ನೆಗಳೊಂದಿಗೆ ಹೇಗೆ ಸೇಡು ತೀರಿಸಿಕೊಳ್ಳಲಿ?” ಎಂದು ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
“ಮೊದಲು ನಾನು ಮಸಾಲ ಹುಡಿಗಳು ಹಾಗೂ ಸಾಬೂನುಗಳ ಮಾರಾಟ ಮಾಡುತ್ತಿದ್ದೆ. ಬಳಿಕ ನಾನು ಇನ್ಶೂರೆನ್ಸ್ ಏಜೆಂಟ್ ಆಗಿ ಕೆಲಸ ಮಾಡಿದೆ. ನಂತರ ಹಲವು ಮನೆಗಳಿಗೆ ಬೇಕಾದ ಸಾಮಗ್ರಿಗಳನ್ನು ಅಂಗಡಿಯಿಂದ ಖರೀದಿಸಿ ನನ್ನ ದ್ವಿಚಕ್ರ ವಾಹನದ ಮೂಲಕ ಮನೆ ಬಾಗಿಲಿಗೆ ತಲುಪಿಸುತ್ತಿದ್ದೆ. ಹೀಗೆ ಕೆಲಸ ಮಾಡಿಯೇ ನಾನು ಸೋಶಿಯಾಲಜಿಯಲ್ಲಿ ಪದವಿ ಪಡೆದುಕೊಂಡೆ” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
2014ರಲ್ಲಿ ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ತಿರುವನಂತಪುರಂನ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡರು. ಮೂರು ವರ್ಷಗಳ ಕಾಲ ಮಹಿಳಾ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸಿದ ಬಳಿಕ 2019ರಲ್ಲಿ ನಡೆದ ಎಸ್ಸೈ ಆಯ್ಕೆ ಪರೀಕ್ಷೆಯನ್ನು ಬರೆದು ಅದರಲ್ಲಿ ಯಶಸ್ವಿಯಾದರು. ಒಂದೂವರೆ ವರ್ಷಗಳ ತರಬೇತಿಯ ಬಳಿಕ ಇದೀಗ ಟ್ರೈನೀ ಅನ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.