ಸೇತುವೆಯಡಿಯಿಂದ ರಾತ್ರಿ ವೇಳೆ ಅಕ್ರಮ ಮರಳುಗಾರಿಕೆ | ತಹಶೀಲ್ದಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ದಾಳಿ | ಟಿಪ್ಪರ್,ದೋಣಿ ,ಮರಳು ವಶಕ್ಕೆ

ಮಂಗಳೂರು: ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ನದಿಯಿಂದ ಮರಳು ತೆಗೆದು ಮಾರಾಟ ಮಾಡುತ್ತಿದ್ದ ಸ್ಥಳವೊಂದಕ್ಕೆ ಮಧ್ಯರಾತ್ರಿ ವೇಳೆ ಅರಣ್ಯ ಅಧಿಕಾರಿಗಳ ಜೊತೆ ತಹಶಿಲ್ದಾರ್ ದಾಳಿ ನಡೆಸಿ ಮರಳುಗಾರಿಕೆಗೆ ಬಳಸುವ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.

ಪಾಣೆಮಂಗಳೂರು ಹಳೆಯ ಸೇತುವೆಯ ಕೆಳಭಾಗದಿಂದ ರಾತ್ರಿ ವೇಳೆ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಆರೋಪದ ಮೇಲೆ ತಹಶಿಲ್ದಾರ್ ರಶ್ಮಿ. ಎಸ್.ಆರ್.ಅವರು ಗೌಪ್ಯವಾಗಿ ಅರಣ್ಯ ಇಲಾಖಾ ಅಧಿಕಾರಿಗಳ ಜೊತೆ ಶುಕ್ರವಾರ ದಾಳಿ ನಡೆಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದು ಸ್ಥಳದಲ್ಲಿ ಒಂದು ಟಿಪ್ಪರ್, ಒಂದು ದೋಣಿ ಬಿಟ್ಟು ಪರಾರಿಯಾಗಿದ್ದಾರೆ.

ಜಿಲ್ಲಾಡಳಿತದ ಆದೇಶದಂತೆ ಸುರಕ್ಷತೆಯ ದೃಷ್ಟಿಯಿಂದ ಸೇತುವೆಯ ಸಮೀಪ ಇಲಾಖೆ ನಿಗದಿಪಡಿಸಿದ ದೂರದವರೆಗೆ ಯಾವುದೇ ಕಾರಣಕ್ಕೂ ಮರಳುಗಾರಿಕೆ ಮಾಡಬಾರದೆಂಬ ಕಟ್ಟು ನಿಟ್ಟಿನ ಆದೇಶ ಇದ್ದರೂ ಕೂಡ ಅಕ್ರಮವಾಗಿ ರಾತ್ರಿ ವೇಳೆ ಡ್ರಝಿಂಗ್ ಮೆಷಿನ್ ಬಳಕೆ ಮಾಡಿ ಮರಳು ತೆಗೆಯುವುದರ ಬಗ್ಗೆ ದೂರುಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆದರಿಸಿ ರಾತ್ರಿ ದಿಡೀರ್ ದಾಳಿ ನಡೆಸಿದ್ದಾರೆ.

ತಹಶಿಲ್ದಾರ್ ರಶ್ಮಿ. ಎಸ್.ಆರ್ ಅವರು ಈ ಹಿಂದೆಯೂ ಅಕ್ರಮ ಮರಳುಗಾರಿಕೆ ಬಗ್ಗೆ ಅನೇಕ ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದರು.

ಬಂಟ್ವಾಳ ವಲಯ ಅರಣ್ಯಾಧಿಕಾರಿ‌ ರಾಜೇಶ್ ಬಳಿಗಾರ್ ನೇತ್ರತ್ವದ ತಂಡ ದಲ್ಲಿ ಅಧಿಕಾರಿಗಳಾದ ಪ್ರೀತಂ, ಜಿತೇಶ್ ಸಿಬ್ಬಂದಿ ಗಳಾದ ಬಸವ , ಪ್ರವೀಣ್ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.