ಮರ್ಯಾದೆ ಹತ್ಯೆಗೆ ಬಲಿಯಾಯಿತು ಅಪ್ರಾಪ್ತ ಬಾಲಕಿ ಸಹಿತ ಎರಡು ಜೀವ..ಪ್ರೇಮಿಗಳನ್ನು ಹೊಲದಲ್ಲಿ ಮರಕ್ಕೆ ಕಟ್ಟಿ ಹಾಕಿ ಕೊಂದವರಾರು?

 

ಹೀಗೊಂದು ಮರ್ಯಾದೆ ಹತ್ಯೆಯು ನಡೆದಿದ್ದು,ಮರ್ಯಾದೆಗಾಗಿ ಮುಗ್ಧ ಜೀವಗಳೆರಡು ಬಲಿಯಾಗಿದೆ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಲಾದ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆಯಂತೆ ಕಂಡರೂ ಮರ್ಯಾದೆ ಹತ್ಯೆ ಎಂದು ಶಂಕಿಸಲಾಗಿದೆ.

 ಪ್ರೀತಿಗೆ ಜಾತಿ ಇಲ್ಲವೆಂಬಂತೆ ಅದೆರಡು ಜೋಡಿ ಪರಸ್ಪರ ಪ್ರೀತಿಯಲ್ಲಿ ತೊಡಗಿತ್ತು.ಆ ಪ್ರೀತಿ ಹೆಚ್ಚು ಹೊತ್ತೇನು ಇರಲಿಲ್ಲ,ಕೆಲ ಹೊತ್ತಿನಲ್ಲೇ ಅಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಆ ಮುಗ್ಧ ಪ್ರೇಮಿಗಳನ್ನು ಮರಕ್ಕೆ ಕಟ್ಟಿ ಥಳಿಸಿ ಕೊಲೆಗಯ್ಯಲಾಗಿದ್ದು, ಬಾಲಕಿಯ ತಂದೆ ಹಾಗೂ ಇನ್ನಿಬ್ಬರು ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆ.ಗ್ರಾಮದ ಆಟೋ ಚಾಲಕ ಮಡಿವಾಳಪ್ಪ ಬಡಿಗೇರ ಹಾಗೂ ಅಪ್ರಾಪ್ತ ಬಾಲಕಿ ಕೊಲೆಯಾದವರು.

ಇಲ್ಲಿ ಕೊಲೆಗೆ ಕಾರಣವೆಂದರೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ ಆಟೋ ಚಾಲಕ ಅನ್ಯ ಕೋಮಿಗೆ ಸೇರಿದವ.ಈ ವಿಚಾರವಾಗಿಯೇ ಆಕೆಯ ತಂದೆ ಅವರಿಬ್ಬರನ್ನು ಕೊಂದಿದ್ದಾರೆ ಎಂಬ ಸುದ್ದಿ ಗ್ರಾಮದೆಲ್ಲೆಡೆ ಹರಿದಾಡುತ್ತಿದೆ.ಕಳೆದ ಆರು ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯ ಪ್ರೀತಿ ವಿಚಾರವು ಈ ಮೊದಲೇ ಬಾಲಕಿಯ ಮನೆಯಲ್ಲಿ ಗೊತ್ತಾಗಿದ್ದು, ಆತನಿಗೆ ಬುದ್ಧಿ ಹೇಳಲಾಗಿತ್ತು. ಆದರೂ ನಿನ್ನೆ ಆ ಜೋಡಿಗಳು ಹೊಲದಲ್ಲಿ ಸಿಕ್ಕಿಬಿದ್ದು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ. ಅದೇನೇ ಇರಲಿ, ಆಕೆ ಇನ್ನೂ ಅಪ್ರಾಪ್ತ ಬಾಲಕಿ ಎಂಬುವುದು ಆತನಿಗೆ ಅರಿವಿರಬೇಕಿತ್ತು ಎಂದು ಕೆಲವರು ಹೇಳಿದರೆ, ಹೆತ್ತ ಮಗಳೆಂಬುದನ್ನು ನೋಡದೆ ಕೊಂದನಲ್ಲ ಪಾಪಿ ಎಂದು ಇನ್ನೂ ಕೆಲವರು ಶಾಪ ಹಾಕುತ್ತಿರುವುದು ಕಂಡುಬಂತು.

Leave A Reply

Your email address will not be published.