ಈ ಗ್ರಾಮದಲ್ಲಿ ಕಳ್ಳರು ಕದ್ದಿದ್ದು ನಗ-ನಗದಲ್ಲ ….ದನದ ಸೆಗಣಿ!!
ರಾಯ್ಪುರ: ಚಿನ್ನ, ಬೆಳ್ಳಿ, ಹಣವನ್ನೆಲ್ಲ ಕಳ್ಳತನ ಮಾಡುವುದನ್ನು ನೋಡಿರುತ್ತೀರಿ. ಆದರೆ ಈ ಗ್ರಾಮದಲ್ಲಿ ಹಸುವಿನ ಸೆಗಣಿಯನ್ನೇ ಕಳ್ಳತನ ಮಾಡಲಾಗಿದೆಯಂತೆ! ಒಂದೇ ರಾತ್ರಿಯಲ್ಲಿ ಬರೋಬ್ಬರಿ 800 ಕೆಜಿ ಸೆಗಣಿ ಕಳ್ಳತನವಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಚತ್ತೀಸ್ಗಢದ ಡಿಪ್ಯಾ ಪೊಲೀಸ್ ಠಾಣೆ ವ್ಯಾಪ್ತಿಯ ಧುರೇನಾ ಗ್ರಾಮದಲ್ಲಿ ಇಂತಹ ಕಳ್ಳತನವಾಗಿದೆ. ರಾತ್ರಿ ವೇಳೆ ಯಾರೋ ಕಳ್ಳರು ಪೂರ್ತಿ ಗ್ರಾಮದ ಎಲ್ಲ ಹಸುಗಳ ಸೆಗಣಿಯನ್ನು ಕದ್ದಿದ್ದಾರಂತೆ.
ಅಷ್ಟಕ್ಕೂ ಈ ಗ್ರಾಮದಲ್ಲಿ ಸೆಗಣಿ ಕಳ್ಳತನವಾಗಲು ಒಂದು ಕಾರಣವಿದೆ. ಚತ್ತೀಸ್ಗಢದಲ್ಲಿ 2020ರಲ್ಲಿ ಭೂಪೇಶ್ ಬಾಗೆಲ್ ಸರ್ಕಾರವು ಗೋಧನ್ ನ್ಯಾಯ ಯೋಜನೆ ಆರಂಭಿಸಿದ್ದಾರೆ. ಈ ಯೋಜನೆಯಲ್ಲಿ ಕೃಷಿಕರು, ಹೈನುಗಾರಿಕೆ ಮಾಡುವವರಿಂದ ಸೆಗಣಿಯನ್ನು ಕೆ.ಜಿ ಗೆ 2 ರೂಪಾಯಿಯಂತೆ ಖರೀದಿಸಿ, ಅದರಿಂದ ಗೊಬ್ಬರ ತಯಾರಿಸಿ ಕಡಿಮೆ ಬೆಲೆಯಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಆ ಲೆಕ್ಕದಲ್ಲಿ ಸರಿ ಸುಮಾರು 800 ಕೆ.ಜಿ ಸೆಗಣಿ ಕದ್ದಿರುವ ಕಳ್ಳರು ಅದರಿಂದ 1600 ರೂಪಾಯಿ ಗಳಿಸಬಹುದಾಗಿದೆ.
ಇದೇ ಕಾರಣಕ್ಕಾಗಿ ಈ ಕಳ್ಳತನ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ಅದೇ ಗ್ರಾಮದ ಸಂಘಟನೆಯೊಂದರ ಮುಖ್ಯಸ್ಥ ಡಿಸ್ಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಹುಡುಕಾಟದಲ್ಲಿದ್ದಾರೆ.