ಆಗಷ್ಟೇ ಹುಟ್ಟಿದ 5 ಬೆಕ್ಕಿನ ಮರಿಗಳನ್ನು ಮಹಡಿಯಿಂದ ಎಸೆದು ಅಮಾನುಷವಾಗಿ ನಡೆದುಕೊಂಡ ಮಹಿಳೆ..ಮಂಗಳೂರಿನ ಅತ್ತಾವರದಲ್ಲಿ ನಡೆದ ಘಟನೆ,ಮರಿಗಳನ್ನು ರಕ್ಷಿಸಿದ ಅನಿಮಲ್ ಕೇರ್ ಟ್ರಸ್ಟ್

ಇತ್ತೀಚೆಗೆ ನಾಯಿ ಚಪ್ಪಲಿ ಕಚ್ಚಿತೆಂಬ ಕಾರಣವನ್ನಿಟ್ಟು, ನಾಯಿಯನ್ನು ಬೈಕ್ ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಇನ್ನೊಂದು ಪ್ರಾಣಿ ಹಿಂಸೆ ನಡೆದಿರುವುದು ಬೆಳಕಿಗೆ ಬಂದಿದೆ.

 

ಯಾವ ಪಾಪ ಮಾಡಿ ಇಲ್ಲಿ ಹುಟ್ಟಿದೆವೋ ಎಂದು ಏನೂ ಅರಿಯದೆ ಅಳುತ್ತಿರುವ ಬೆಕ್ಕಿನ ಮರಿಗಳು ಒಂದೆಡೆಯಾದರೆ, ಮಹಡಿ ಮೇಲಿಂದ ಎಸೆದು ಅಮಾನವೀಯವಾಗಿ ನಡೆದುಕೊಂಡ ಮಹಿಳೆ ಇನ್ನೊಂದೆಡೆ. ಅರೇ, ಇದೇನೂ ಹೊರ ಜಿಲ್ಲೆಯ ವಿಷಯವಲ್ಲ. ಬುದ್ಧಿವಂತರ ನಾಡಾದ ದಕ್ಷಿಣ ಕನ್ನಡದಲ್ಲಿ ನಡೆದ ಅಮಾನವೀಯ ಘಟನೆ. ಆಗ ತಾನೇ ಹುಟ್ಟಿದ ಮುದ್ದಾದ 5 ಬೆಕ್ಕಿನ ಮರಿಗಳನ್ನು ಮನೆಯ ಮಹಡಿಯಿಂದ ಮಹಿಳೆಯೊಬ್ಬಳು ಕೆಳಗೆ ಬಿಸಾಡಿ ಅಮಾನವೀಯವಾಗಿ ನಡೆದುಕೊಂಡ ಘಟನೆ ಮಂಗಳೂರಿನ ಅತ್ತಾವರದ ಫ್ಲ್ಯಾಟ್‌ವೊಂದರಲ್ಲಿ ನಡೆದಿದೆ.

ಮಹಿಳೆಯು ಹೊಡೆದು ಓಡಿಸಿದ ತಾಯಿ ಬೆಕ್ಕು ಸಹಿತ ಮಹಡಿ ಕೆಳಗೆ ಬಿದ್ದಿದ್ದ ಮರಿ ಬೆಕ್ಕುಗಳನ್ನು ಮಂಗಳೂರಿನ ಶಕ್ತಿನಗರದ ಅನಿಮಲ್ ಕೇರ್ ಸದಸ್ಯರು ರಕ್ಷಿಸಿದ್ದು,ಮಳೆಗೆ ಒದ್ದೆಯಾಗಿ ನರಳುತ್ತಿದ್ದ ಪುಟ್ಟ ಪುಟ್ಟ ಮರಿಗಳಿಗೆ ಬೆಚ್ಚನೆಯ ಆಶ್ರಯದ ಜೊತೆಗೆ ಮರುಜನ್ಮವನ್ನು ನೀಡಿದ್ದಾರೆ.


ರಾಕ್ಷಸಿ ನಡೆ ತೋರಿಸಿದ ಮಹಿಳೆಯ ಕ್ರೂರತೆಯನ್ನು ಹಲವು ಮಂದಿ ಕಣ್ಣಾರೆ ಕಂಡಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬುದ್ಧಿವಂತರ ಜಿಲ್ಲೆಗೆ ಕಳಂಕ ತರುವ ಇಂತಹ ಮೃಗ ರೂಪದ ಮನುಷ್ಯರ ಮೇಲೆ ಸಂಬಂಧ ಪಟ್ಟ ಇಲಾಖೆಯು ಕಠಿಣ ಕಾನೂನು ಕ್ರಮ ಕೈಗೊಳ್ಳಲಿ ಎಂಬುವುದು ಎಲ್ಲರ ಆಶಯ.

Leave A Reply

Your email address will not be published.