ಲಾಯಿಲ : ಸೀಲ್‌ಡೌನ್ ನಿಯಮ ಉಲ್ಲಂಘಿಸಿ ತಾಳಮದ್ದಳೆ | ಕ್ರಮಕ್ಕೆ ಒತ್ತಾಯ

ಕೋವಿಡ್ 19 ವ್ಯಾಪಕವಾಗಿ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೀಲ್ ಡೌನ್ ಮಾಡಲಾದ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದ ನಿಯಮಾವಳಿಗಳನ್ನು ಮೀರಿ ಕಾನೂನು ಬಾಹಿರವಾಗಿ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಲಾಗಿರುವ ಘಟನೆ ಸಂಭವಿಸಿದೆ.

 

ಲಾಯಿಲ ಗ್ರಾಮದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿರುವ ಕಾರಣ ದ.ಕ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಂಟೋನ್ಮೆಂಟ್ ವಲಯ ಎಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಜನರು ಮನೆಯಿಂದ ಹೊರಗೆ ಬರದಂತೆ ತಡೆಯಲಾಗಿದೆ. ಇದರಿಂದಾಗಿ ಕೂಲಿಕಾರರು ಸೇರಿದಂತೆ ದಿನನಿತ್ಯ ಜೀವನಕ್ಕಾಗಿ ದುಡಿಯುವವರು ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇದೆಲ್ಲದರ ನಡುವೆ ಲಾಯಿಲ ಗ್ರಾಮ ಪಂಚಾಯತ್ ಮಾತ್ರ ಯಕ್ಷಗಾನ ತಾಳಮದ್ದಳೆ ನಡೆಸಲು ಅನುಮತಿ ನೀಡಿದೆ. ಜೂನ್ 12 ರಿಂದ ಜೂನ್ 20 ರವರೆಗೆ ಯಕ್ಷಗಾನ ತಾಳಮದ್ದಳೆ ನಡೆಸಲು ಹಾಗೂ ಎರಡು ದಿನಗಳ ಯಕ್ಷ ನೃತ್ಯ ಕಾರ್ಯಕ್ರಮವನ್ನು ಛಾಯಾಗ್ರಹಣ ಮಾಡಲು ಅನುಮತಿ ನೀಡಿದೆ. ಆ ಮೂಲಕ ಸರ್ಕಾರದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿದೆ.

ದ.ಕ ಜಿಲ್ಲೆಯಲ್ಲಿ ಅತಿ ಹೆಚ್ಚು ಕೋವಿಡ್ 19 ಸೋಂಕು ತಗುಲಿದ ತಾಲೂಕುಗಳಲ್ಲಿ ಬೆಳ್ತಂಗಡಿ ತಾಲೂಕು ಮೊದಲ ಸ್ಥಾನದಲ್ಲಿದ್ದರೂ ಕೂಡ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಪಂಚಾಯತ್ ಆಡಳಿತ ಮಂಡಳಿಯ ನಿರ್ಲಕ್ಷ್ಯತೆ , ಬೇಜಾವ್ದಾರಿಯಿಂದ ನಿಯಮಾವಳಿಗಳನ್ನು ಮೀರಿ ಅನುಮತಿ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಅನುಮತಿ ನೀಡಿದ ಪಂಚಾಯತ್ ಆಡಳಿತ ಹಾಗೂ ಕಾರ್ಯಕ್ರಮ ಸಂಘಟಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave A Reply

Your email address will not be published.