ದೇವಸ್ಥಾನಕ್ಕೆ ನುಗ್ಗಿ ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು
ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು, ಗರ್ಭಗುಡಿಯಲ್ಲಿದ್ದ ದೇವರ ಬೆಳ್ಳಿಯ ಮೂರ್ತಿಯನ್ನೇ ಕದ್ದು ಪರಾರಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಸಂಗಮ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸಂಗಮ ಗ್ರಾಮದ ಕೃಷ್ಣಾ ಮತ್ತು ಭೀಮಾ ಸಂಗಮ ನದಿ ದಡದಲ್ಲಿರುವ ಸಂಗಮೇಶ್ವರ ದೇವಸ್ಥಾನದ ಮೂರ್ತಿಯನ್ನು ಕಳ್ಳತನ ಮಾಡಲಾಗಿದೆ.
ನಿನ್ನೆ ತಡರಾತ್ರಿ ದೇವಸ್ಥಾನದ ಬೀಗ ಮುರಿದು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಗರ್ಭಗುಡಿಯಲ್ಲಿದ್ದ ಸುಮಾರು ಎರಡೂವರೆ ಕೆಜಿಯ ಬೆಳ್ಳಿಯ ಮೂರ್ತಿಯನ್ನು ಕದ್ದೊಯ್ದು ಪರಾರಿಯಾಗಿದ್ದಾರೆ.
ಬೆಳಗ್ಗೆ ದೇವಸ್ಥಾನಕ್ಕೆ ಅರ್ಚಕರು ಪೂಜೆಗೆಂದು ಬಂದಾಗ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.