ಲವ್ ಜಿಹಾದ್ ಬಲೆಗೆ ಬಿದ್ದ ಯುವತಿ | ಆಧಾರ್ ಕಾರ್ಡ್ ನಲ್ಲಿ ‘ಮುರ್ತಜಾ’ ಹೊರಪ್ರಪಂಚಕ್ಕೆ ‘ಮೃತ್ಯುಂಜಯ್’
ತನ್ನ ಲಿವ್ ಇನ್ ಸಂಗಾತಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
30 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಮತಾಂತರವಾಗಲು ಒತ್ತಾಯ ಮಾಡುತ್ತಿದ್ದ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ಆರೋಪಿ ಮುರ್ತಾಜಾ ಹೆಸರು ಬದಲಿಸಿಕೊಂಡು ಮೃತುಂಜಯ್ ಎಂದು ಓಡಾಡಿಕೊಂಡಿದ್ದ. ಪಶ್ಚಿಮ ಯುಪಿಯ ಮೊರಾದಾಬಾದ್ ಜಿಲ್ಲೆ ಮೂಲದ ವ್ಯಕ್ತಿ ಬಿಸ್ರಾಖ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಯುವತಿಯೊಂದಿಗೆ ವಾಸ ಮಾಡುತ್ತಿದ್ದ.
ಇಬ್ಬರು ಫಾರ್ಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2019 ರಲ್ಲಿ ಇಬ್ಬರ ಪರಿಚಯವಾಗಿತ್ತು. ಉಳಿದ ಉದ್ಯೋಗಿಗಳು ಆರೋಪಿಯನ್ನು ‘ಮೃತ್ಯುಂಜಯ್’ ಎಂದು ಕರೆಯುತ್ತಿದ್ದರು. ತನ್ನನ್ನು ಹಾಗೆಯೇ ಆತ ಪರಿಚಯಿಸಿಕೊಂಡಿದ್ದ. ಇಬ್ಬರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಒಂದು ದಿನ ಆಧಾರ್ ಕಾರ್ಡ್ ನೋಡುವಾಗ ಅದರಲ್ಲಿ ಈತನ ಹೆಸರು ಮುರ್ತಜಾ ಎಂದು ಇದ್ದದ್ದು ಗೊತ್ತಾಗಿದೆ. ಯುವತಿಗೆ ಅನುಮಾನ ಬಂದು ಪ್ರಶ್ನೆ ಮಾಡಿದಾಗ ಆತ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ನಂತರ ಯುವತಿ ಮದುವೆಗೆ ಒತ್ತಾಯ ಮಾಡಿದಾಗ ಮತಾಂತರ ಆಗಬೇಕು ಎಂದು ಪಟ್ಟು ಹಿಡಿದಿದ್ದಾನೆ. ನೊಂದ ಯುವತಿ ಅತ್ಯಾಚಾರ ಮತ್ತು ಒತ್ತಾಯದ ಮತಾಂತರ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಬಿಸ್ರಾಖ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೇಲೆ 2020 ರ ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೂನ್ 14 ರಂದು ಎಫ್‌ಐಆರ್ ದಾಖಲಿಸಲಾಗಿದ್ದು, ಮರುದಿನವೇ ಆರೋಪಿ ಬಂಧನಕ್ಕೆ ಕ್ರಮ ತೆಗೆದುಕೊಳ್ಳಲಾಯಿತು. ಭಾರತೀಯ ದಂಡ ಸಂಹಿತೆ ಸೆಕ್ಷನ್ 323 (ನೋವನ್ನುಂಟುಮಾಡುವುದು), 504 (ಶಾಂತಿ ಉಲ್ಲಂಘನೆ) 506 (ಕ್ರಿಮಿನಲ್ ಬೆದರಿಕೆ), 376 (ಅತ್ಯಾಚಾರ), 406 (ನಂಬಿಕೆಯ ಅಪರಾಧ ಉಲ್ಲಂಘನೆ ) ಆರೋಪದ ಮೇಲೆ ದೂರು ದಾಖಲಾಗಿದೆ.