ಕಾಡಿನ ರಾಜನಿಗೇ ಬೆದರದೆ ಟಕ್ಕರ್ ಕೊಟ್ಟ ಕಾಡುಕೋಣ | ಕಾದಾಟದಲ್ಲಿ ಹುಲಿ ಸಾವು
ಕಾಡುಕೋಣದ ಜೊತೆ ಕಾದಾಡಿ ಹುಲಿಯೊಂದು ಮೃತಪಟ್ಟಿರುವ ಘಟನೆ ಹುಲಿ ಸಂರಕ್ಷಿತ ಪ್ರದೇಶವಾದ ಬಂಡಿಪುರ ವಲಯದ ಒಳಕಲ್ಲಾರೆ ಗಸ್ತಿನಲ್ಲಿ ನಡೆದಿದೆ.
ಮೃತ ಹುಲಿಯು ಹೆಣ್ಣು ಹುಲಿಯಾಗಿದ್ದು, ಸುಮಾರು 9-10 ವರ್ಷ ಪ್ರಾಯ ಎಂದು ಅಂದಾಜಿಸಲಾಗಿದೆ.
ಮೇಲ್ನೋಟಕ್ಕೆ ಕಾಡುಕೋಣದ ಕಾದಾಟದಿಂದ ಗಾಯಗೊಂಡಿರುವುದು ಖಚಿತವಾಗಿದೆ. ಇದೇ ಕಾರಣಕ್ಕೆ ಮೃತಪಟ್ಟಿದ್ದು ಎಂದು ತಿಳಿದುಬಂದಿದೆ.
ಬಲಿಷ್ಠ ದೇಹದ ಕಾಡು ಕೋಣಗಳು ಕಾಲು ಕೆದರಿ ಕದನಕ್ಕೆ ನಿಂತರೆ ಯಾವುದನ್ನೂ ಕೇರ್ ಮಾಡುವ ಪ್ರಾಣಿಗಳಲ್ಲ. ತಮ್ಮ ಬಲಿಷ್ಠ ಭುಜ, ಆಕಾಶಕ್ಕೆ ಕೈ ಚಾಚಿದಂತಹ ತೊಡೆ ಗಾತ್ರದ ಕೊಂಬುಗಳು ಇವುಗಳ ಕಾದಾಟಕ್ಕೆ ತುಂಬಾ ಶಕ್ತಿ ನೀಡುತ್ತವೆ. ಹಾಗಾಗಿ ಅದರ ಜೊತೆಗೆ ಕಾದಾಟಕ್ಕೆ ಸಿಕ್ಕಿದ ಪ್ರಾಣಿ ಬಚಾವ್ ಆಗಲು ಸಾಧ್ಯವೇ ಇಲ್ಲ. ಇಲ್ಲಿ ನಡೆದದ್ದು ಅದೇ. ಎದುರೆದುರು ಬಂದ ಕಾಡಿನ ರಾಜನ ಜೀವವನ್ನೇ ತೆಗೆದಿದೆ ಆ ಕೆರಳಿದ ಕಾಡುಕೋಣ.
ಸತ್ತು ಹೋದ ಹುಲಿಯ ಉಗುರುಗಳು, ಹಲ್ಲು, ಇತರ ದೇಹದ
ಅಂಗಾಂಗಳು ಸುರಕ್ಷಿತವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಪಶು ವೈದ್ಯ ಡಾ.ವಾಸೀಂ ಮಿರ್ಜಾ ಶವ ಪರೀಕ್ಷೆ ನಡೆಸಿದ ಬಳಿಕ ಮಾರ್ಗಸೂಚಿಯಂತೆ ಹುಲಿಯ ದೇಹವನ್ನು ಸುಡಲಾಗಿದೆ. ಐದು ದಿನಗಳ ಹಿಂದೆಯಷ್ಟೇ ಮದ್ದೂರು ವಲಯದಲ್ಲಿ ಹುಲಿಯ ಕಳೇಬರವೊಂದು ಪತ್ತೆಯಾಗಿತ್ತು.