ಜೈ ಶ್ರೀರಾಮ್ ಹೇಳಲು ಒತ್ತಾಯಿಸಿ ವೃದ್ಧ ಮುಸ್ಲಿಂ ವ್ಯಕ್ತಿಗೆ ಥಳಿತ | ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಟ್ವಿಟರ್, ವೆಬ್ ಪೋರ್ಟಲ್ ಸಹಿತ ಹಲವರ ಮೇಲೆ ಪ್ರಕರಣ

ಗಾಜಿಯಾಬಾದ್: ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಮೇಲೆ ಯುವಕರ ಗುಂಪು ನಡೆಸಿದ ದಾಳಿಯನ್ನು ವಿವರಿಸುವ ವಿಡಿಯೊವೊಂದನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಪ್ರಸಾರ ಆಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸಾಮಾಜಿಕ ಜಾಲತಾಣ ಟ್ವಿಟರ್, ಸುದ್ದಿ ಪೋರ್ಟಲ್ ಮತ್ತು ಆರು ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

 

ಅಲ್ಲಿನ ಸ್ಥಳೀಯ ಪೊಲೀಸರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ನಿನ್ನೆ ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಗಾಜಿಯಾಬಾದ್‌ನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಮಾಜದಲ್ಲಿ ಕೋಮು ಸಂಘರ್ಷವನ್ನು ಪ್ರಚೋದಿಸುವ ಉದ್ದೇಶದಿಂದ ಈ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾಮಾಜಿಕ ಜಾಲ ತಾಣದಲ್ಲಿ  ವಿಡಿಯೊದ ತುಣುಕಿನಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿ ಅಬ್ದುಲ್ ಶಮದ್ ಸೈಫಿ ಎನ್ನುವವರು ‘ನನಗೆ ಕೆಲವು ಯುವಕರು ಜೈ ಶ್ರೀರಾಮ್’ ಎಂದು ಹೇಳುವಂತೆ ಒತ್ತಾಯಿಸಿ, ಥಳಿಸಿದ್ದಾರೆ’ ಎಂದು ಹೇಳಿರುವ ದೃಶ್ಯವಿದೆ. ಈ ವಿಡಿಯೊ ತುಣುಕನ್ನು ಟ್ವಿಟರ್, ವೆಬ್ ಪೋರ್ಟಲ್ ದಿ ವೈರ್ ಸೇರಿದಂತೆ ಹಲವು ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಜೂನ್ 14 ರಂದು ಹಂಚಿಕೊಂಡಿದ್ದರು. ಕೆಲ ಪತ್ರಿಕೆಗಳು ಕೂಡಾ ಅದು ಹಿಂದೂ ಮುಸ್ಲಿಂ ಕಲಹ ಎನ್ನುವ ದೃಷ್ಟಿಯಲ್ಲಿ ಉತ್ಸಾಹದಿಂದ ಬರೆದಿದ್ದವು.

ಇದೀಗ ಆ ಸುದ್ದಿ ಸುಳ್ಳಾಗಿದೆ. ಆ ವೃದ್ದ ಮುಸ್ಲಿಂ ವ್ಯಕ್ತಿ ಆರೋಪಿಗಳಿಗೆ ಮಂತ್ರಿಸಿದ ತಾಯಿತ ಮಾರಾಟ ಮಾಡಿದ್ದರಂತೆ. ಆ ವಿಚಾರವಾಗಿ ವೃದ್ಧ ವ್ಯಕ್ತಿ ಮತ್ತು ಆರೋಪಿಗಳ ನಡುವೆ ವ್ಯಾಜ್ಯ ಏರ್ಪಟ್ಟಿದೆ. ಇದನ್ನು ಯಾರೋ ಸರಿಯಾಗಿ ಬಳಸಿಕೊಂಡು ಇದನ್ನು ಕೋಮುಸಾಮರಸ್ಯ ಕೆಡಿಸುವ ಒಂದು ವಿಷಯವನ್ನಾಗಿ ಮಾಡಿದ್ದಾರೆ. ಇದೀಗ ಪ್ರಾಥಮಿಕ ತನಿಖೆಯಿಂದ ಅದು ಸಾಬೀತಾಗಿದ್ದು,
‘ಸಮಾಜದಲ್ಲಿ ಕೋಮು ಸೌಹಾರ್ದ ಕದಡುವ ಉದ್ದೇಶದಿಂದ ಈ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ’ ಎಂಬ ದೂರಿನ ಹಿನ್ನೆಲೆಯಲ್ಲಿ ಗಾಜಿಯಾಬಾದ್ ಪೊಲೀಸರು ಆ ವೃದ್ದ ಮುಸ್ಲಿಂ ಸಮುದಾಯದ ವ್ಯಕ್ತಿಯೂ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

Leave A Reply

Your email address will not be published.