ಕಳೆಂಜ | ಇಂದು ಸುರಿದ ಭಾರೀ ಗಾಳಿ-ಮಳೆಗೆ ಹಲವು ಮನೆಗಳಿಗೆ ಹಾನಿ

ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಾಳ ಪರಿಸರದಲ್ಲಿ ಇಂದು ಸುರಿದ ಭಾರೀ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿಯುಂಟಾಗಿ ಅಪಾರ ನಷ್ಟವುಂಟಾಗಿದೆ.

 

ಭೀಕರ ಗಾಳಿಯ ರಭಸಕ್ಕೆ ಪಾಂಗಾಳ ನಿವಾಸಿಗಳಾದ ಕೃಷ್ಣಪ್ಪ ಗೌಡ, ಲಕ್ಷಣ ಗೌಡ, ಗುಮ್ಮಣ್ಣ ಪೂಜಾರಿ, ಚಿದಾನಂದ ಇವರ ಮನೆ ಹಾಗೂ ಕೊಟ್ಟಿಗೆಯ ಮೇಲೆ ಮರಗಳು ಬಿದ್ದ ಹಿನ್ನೆಲೆ ಮನೆಯ ಹಂಚುಗಳು ಪುಡಿ ಪುಡಿಯಾಗಿದ್ದು, ಹಂಚಿಗೆ ಅಳವಡಿಸಲಾಗಿದ್ದ ಸಿಮೆಂಟು ಶೀಟುಗಳು ಹಾರಿ ಹೋಗಿ, ಗೋಡೆಗಳು ಬಿರುಕು ಬಿಟ್ಟಿದೆ.

ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದಯಾನಂದ ಎಂಬವರ ತೋಟದಲ್ಲಿ ಅಡಿಕೆ ಮರಗಳು ಮುರಿದು ಬಿದ್ದು ಅಪಾರ ನಷ್ಟವುಂಟಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕಳೆಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ, ಗ್ರಾ.ಪಂ ಸದಸ್ಯರುಗಳು, ಗ್ರಾಮಕರಣಿಕರು, ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave A Reply

Your email address will not be published.