ಆ ಮಗುವಿನ ಅಪರೂಪದ ಖಾಯಿಲೆಯ ಒಂದು ಇಂಜೆಕ್ಷನ್ ಗೆ 16 ಕೋಟಿ ಬೇಕಿತ್ತು | ಜನಸಾಮಾನ್ಯರಲ್ಲಿ ಒಬ್ಬಾತ ಆ ದುಡ್ಡು ಎತ್ತಿ ಕೊಟ್ಟಿದ್ದ !!

ಹೈದರಾಬಾದ್ : ಮಗು ಎದ್ದು ಎಲ್ಲರಂತೆ ಓಡಾಡಬೇಕಾದರೆ ಇರುವುದು ಅದೊಂದೇ ದಾರಿ. ಅದು ಬಿಟ್ಟರೆ ಬೇರೆ ಯಾವುದೇ ದಾರಿ ಇಲ್ಲ ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದ್ದರು. ಅದು ಸಾಧ್ಯವಿಲ್ಲದ ಮಾತು ಎಂದು ಪೋಷಕರು ಹತಾಶರಾಗಿ ಕೈಚೆಲ್ಲಿ ಕುಳಿತಿದ್ದರು.

 

ಮಗುವನ್ನು ಎಲ್ಲ ಮಕ್ಕಳಂತೆ ಮಾಡಲು ಪೋಷಕರು ಯಾವ ಮಟ್ಟಕ್ಕೂ ತಯಾರಿದ್ದರು. ಆದರೆ ಅದಕ್ಕೆ ತುಂಬಾ ದುಡ್ಡು ಖರ್ಚಾಗುತ್ತಿತ್ತು. ಕೆಲವು ಲಕ್ಷಗಳನ್ನು ಹೊಂದಿಸುವುದಿದ್ದರೆ ಆ ಕುಟುಂಬ ಹೇಗೋ ಹೊಂದಿಸಿಕೊಳ್ಳುತ್ತಿತ್ತು. ಆದರೆ ಮಗುವಿನ ಒಂದು ಇಂಜೆಕ್ಷನ್ ನಿಗೆ ಬರೋಬ್ಬರಿ 16 ಕೋಟಿ ರೂಪಾಯಿಗಳು ಬೇಕಿತ್ತು !

ಮಗುವಿನ ಬಗ್ಗೆ ಆಸೆಯನ್ನೇ ಬಿಟ್ಟಿದ್ದರು ಹೈದರಾಬಾದ್ ನ ಆ ದಂಪತಿ.16 ಕೋಟಿಯ ಔಷಧಿ ಯಾವತ್ತಿಗೂ ಅವರಿಗೆ ಕೈಗೆಟಕದ ಸ್ವತ್ತಾಗಿತ್ತು.

ಆಗ ದಿಢೀರನೆ ಜನಸಾಮಾನ್ಯರ ಗುಂಪಿನಿಂದ ಒಬ್ಬಾತ ಎದ್ದು ನಿಂತಿದ್ದ ! ಆತನ ಚಾಚಿದ ಕೈಗಳಲ್ಲಿ ಬರೋಬ್ಬರಿ 16 ಕೋಟಿಗಳ ಕಂತೆ ಕಂತೆ ನೋಟುಗಳಿದ್ದವು !!
ಅಂತ ಆಪತ್ಬಾಂಧವನ ಸುಂದರ ಹೆಸರೇ ಸೋಶಿಯಲ್ ಮೀಡಿಯಾ !!!

ಹೈದರಾಬಾದ್‌ನ ರೂಪಲ್ ಹಾಗೂ ಯೋಗೇಶ್ ಪುತ್ರ ಅಯಾಂಶ್ ಗೆ 2018ರ ಜೂನ್ 4ರಂದು, ಅತ್ಯಪರೂಪದ ವಂಶವಾಹಿ ಸಮಸ್ಯೆಯಾದ ಸ್ಪೈನಲ್ ಮಸ್ಕುಲರ್ ಅಟ್ರೋಫಿ (ಎಸ್ಎಂಎ) ಸಮಸ್ಯೆ ಇರೋದು ಗೊತ್ತಾಗಿತ್ತು. ಅದು ಆತನ ಜೀವಕ್ಕೆ ಕುತ್ತು ತರುವ ಮಟ್ಟದಲ್ಲಿತ್ತು. ಈ ಸಮಸ್ಯೆಗೆ ದೇಶದಲ್ಲಿ ಎಲ್ಲೂ ಸಹ ಚಿಕಿತ್ಸೆ ಲಭ್ಯವಿರಲಿಲ್ಲ. ಅದೂ ಅಲ್ಲದೇ ಈ ಸಮಸ್ಯೆಗೆ ಬೇಕಾದ ಮದ್ದನ್ನು ಆಮದು ಮಾಡಿಕೊಳ್ಳಲು ಜಿಎಸ್‌ಟಿ ಹೊರತಾಗಿಯೇ 16 ಕೋಟಿ ರೂ.ಗಳು ಬೇಕಾಗಿತ್ತು.

ತಮ್ಮಿಂದ ಆಗದು ಎಂದು ಕೈಕಟ್ಟಿ ಕುಳಿತಿದ್ದ ದಂಪತಿಗಳು ಕೊನೆಗೆ ಮಗುವನ್ನು ಸಾಮಾಜಿಕ ಜಾಲತಾಣದ ಮಡಿಲಿಗೆ ಹಾಕಿದ್ದರು. ಫೆಬ್ರವರಿ 5, 2021ರಿಂದ ಸಾಮೂಹಿಕವಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಮುಂದಾದ ಅಯಾಂಶ್ ತಂದೆ – ತಾಯಂದಿರ ನೆರವಿಗೆ ಸಾವಿರಾರು ತಂದೆಯರು ತಾಯಿಯರು ಬಂಧು ಭಗಿನಿಯರು ಒಂದೊಂದು ಹಿಡಿ ಸಹಾಯ ಶುರುಮಾಡಿದ್ದರು. ಚಿಲ್ಲರೆ ಸಾವಿರವಾಗಿ ಸಾವಿರ ಲಕ್ಷ ಲಕ್ಷಗಳು ಕೋಟಿಯಾಗಿ ಬರೋಬ್ಬರಿ 14.86 ಕೋಟಿ ದುಡ್ಡು ಸಂಗ್ರಹವಾಗಿತ್ತು. ಒಟ್ಟು 62450 ದಷ್ಟು ದೇಣಿಗೆದಾರರು ಮಗುವಿನ ಬೆನ್ನಿಗೆ ನಿಂತರು. ಇಂಪ್ಯಾಕ್ಟ್ ಗುರು ಡಾಟ್ ಕಾಮ್ ಮೂಲಕ ಕ್ರೌಡ್ ಫಂಡಿಂಗ್ ಗೆ ಇಳಿದ ದಂಪತಿಗೆ ಬಾಲಿವುಡ್ ಸಿನಿ ತಾರೆಯರಾದ ಅನುಷ್ಕಾ ಶರ್ಮಾ, ಅನಿಲ್ ಕಪೂರ್, ಅಜಯ್ ದೇವ್ಗನ್ ಮುಂತಾದವರೂ ಕೂಡಾ ಸಹಾಯ ನೀಡಿದ್ದಾರೆ. ಓರ್ವ ವ್ಯಕ್ತಿ ಬರೋಬ್ಬರಿ 56 ಲಕ್ಷ ರೂಪಾಯಿ ನೀಡಿ ತನ್ನ ಹೃದಯ ವೈಶಾಲ್ಯತೆ ತೋರಿಸಿದ್ದಾನೆ.

ಇದೀಗ ಆ ದುಡ್ಡಿನಿಂದ ಅಮೆರಿಕದಿಂದ ಈ ದುಬಾರಿ ಮದ್ದನ್ನು ತರಿಸಿಕೊಡಲು ನೆರವಾಗಿದ್ದಾರೆ. ನಿಧಿ ಸಂಗ್ರಹಣೆ ಆರಂಭಿಸಿದ ಮೂರೂವರೆ ತಿಂಗಳಲ್ಲೇ ಮದ್ದಿಗೆ ಬೇಕಾದಷ್ಟು ಹಣವನ್ನು ಸಂಗ್ರಹಿಸುತ್ತೇವೆಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಯೋಗೇಶ್ ತಿಳಿಸಿದ್ದಾರೆ.

ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್ ಎಂದು ಪರಿಗಣಿತವಾದ zolgenzma ಸಿಂಗಲ್-ಡೋಸ್ ಪಡೆಯುತ್ತಲೇ, ತಾನು ನಡೆದುಕೊಂಡು ಮನೆಗೆ ಬರಲು ಇಚ್ಛಿಸುವುದಾಗಿ ಮೂರು ವರ್ಷದ ಬಾಲಕ ಅಯಾಂಶ್ ತನ್ನ ಹೆತ್ತವರಿಗೆ ತಿಳಿಸಿದ್ದಾನೆ.

ಈ ಹಿಂದೆ ಸಿಕಂದರಾಬಾದ್ ನ ಇಬ್ಬರು ಮಕ್ಕಳಿಗೆ ಇದೇ ದುಬಾರಿ ಇಂಜೆಕ್ಷನ್ ಅನ್ನು ಅಮೆರಿಕಾದಿಂದ ತರಿಸಿಕೊಳ್ಳಲಾಗಿತ್ತು. ಆ ಇಂಜೆಕ್ಷನ್ ಅನ್ನು ನೋವಾರ್ಟಿಸ್ ಎಂಬ ಫಾರ್ಮಸ್ಯೂಟಿಕಲ್ ಕಂಪನಿ ಮಕ್ಕಳಿಗೆ ಉಚಿತವಾಗಿ ನೀಡಿತ್ತು. ಇದೀಗ ತಮ್ಮ ಕೈಯಲ್ಲಿ ಆಗಲ್ಲ ಎಂದು ಕೈಚೆಲ್ಲಿ ಕುಳಿತಿದ್ದ ದಂಪತಿಗೆ ಸಮಾಜಮುಖಿ ಮನುಷ್ಯರು ಸಹಾಯ ಮಾಡಿದ್ದಾರೆ. ಆ ಮಗು ಆದಷ್ಟು ಬೇಗ ಎಲ್ಲರಂತೆ ಎದ್ದು ಒಡಾವುದರಲ್ಲಿ ಯಾವ ಅನುಮಾನವೂ ಇಲ್ಲ.

Leave A Reply

Your email address will not be published.