ಅಡಿಕೆಯ ಕಂಬಳದ ಕರೆಯ ನಾಗಾಲೋಟ | ಇವತ್ತಿನ ಅಡಿಕೆಯ ದರ ಕೆಜಿಗೆ 515 ರೂ. !!
ಪುತ್ತೂರು, ಜೂ. 14: ಮಂಗಳೂರು ಅಡಿಕೆ ಮಾರುಕಟ್ಟೆಗೆ ಗೂಳಿ ನುಗ್ಗಿದ ಅನುಭವ. ಅಡಿಕೆಯ ಬೆಲೆ ತನ್ನ ಕಂಬಳದ ಓಟವನ್ನು ಅಡೆತಡೆಯಿಲ್ಲದೆ ಮುಂದುವರೆಸಿದೆ.
ಅಡಿಕೆ ಬೆಲೆ ಮೊನ್ನೆ 500 ರ ಗಡಿ ದಾಟಿ ಸಂಭ್ರಮಿಸಿತ್ತು. ಇದೀಗ ಮತ್ತೆ ಬೆಲೆಯು ಎಲ್ಲಾ ಬೇಲಿಗಳನ್ನು ಮುನ್ನುಗ್ಗಿ ಹಾಯುತ್ತಿದೆ. ನಿನ್ನೆ ಬೆಳ್ಳಾರೆಯ ಅಡಿಕೆ ಮಾರುಕಟ್ಟೆಯಲ್ಲಿ ಹಳೆ ಅಡಿಕೆಗೆ ದಾಖಲೆಯ 515 ರೂಪಾಯಿ !
ಹಳದಿ ಬಣ್ಣದ ಅಡಿಕೆ ಹಣ್ಣುಗಳು ಕೇವಲ ಯಾವುದೋ ಮರವೊಂದರ ಬೀಜಗಳಲ್ಲ. ಅದು ಚಿನ್ನದ ಬೆಲೆ ಒಳಗಿಟ್ಟು ಕೊಂಡಿರುವ ಹಣ್ಣುಗಳು ! ಇವತ್ತು ಪ್ಯಾಂಟಿನ 2 ಕಿಸೆಯಲ್ಲಿ ಅಡಿಕೆ ತುಂಬಿಕೊಂಡು ಹೋದರೆ ಅಂಗಿಯ ಜೇಬಿನಲ್ಲಿ ಐನೂರರ ಗರಿಗರಿ ನೋಟು ಇಟ್ಟುಕೊಂಡು, ಒಂದು ಸಿಂಗಲ್ ಚಾ ಕೂಡಾ ಕುಡಿದು ಬರಬಹುದಾದ ಜಬರ್ದಸ್ತ್ ದುಡ್ಡು.!!
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಮತ್ತಷ್ಟು ಬೇಡಿಕೆ ವ್ಯಕ್ತವಾಗಿದ್ದು ಹೊರ ಮಾರುಕಟ್ಟೆ ಯಲ್ಲಿ ಧಾರಣೆ ಕೂಡಾ ಮೇಲೆದ್ದಿದೆ.
ಕಳೆದೆರಡು ದಿನಗಳಲ್ಲಿ ಹೊಸ ಅಡಿಕೆ, ಹಳೆ ಅಡಿಕೆ ಧಾರಣೆಯಲ್ಲಿ ಕೆ.ಜಿ.ಗೆ 5 ರೂ. ಗಳಂತೆ ಏರಿಕೆ ಕಂಡಿದೆ. ಬೆಳ್ಳಾರೆಯಲ್ಲಿ ಸೋಮವಾರ ಹೊಸ ಅಡಿಕೆಯನ್ನು ಕೆ.ಜಿ.ಗೆ 415 ರೂ. ಗೆ ಕೊಂಡಿದ್ದರೆ, ಹಳೆ ಅಡಿಕೆಯನ್ನು 515 ರೂ.ಗೆ ಖರೀದಿಸಲಾಗಿದೆ. ಕ್ಯಾಂಪೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 405 ಮತ್ತು ಹಳೆ ಅಡಿಕೆಗೆ 505 ರೂ. ಧಾರಣೆ ಇತ್ತು.
ಸಾಮಾನ್ಯವಾಗಿ ಸಿಂಗಲ್ ಮತ್ತು ಡಬ್ಬಲ್ ಚೋಲ್ ಅಡಿಕೆ ನಡುವೆ ವ್ಯತ್ಯಾಸ ಇದ್ದರೂ ಈಗಿನ ಧಾರಣೆಯಲ್ಲಿ ಎರಡನ್ನೂ ಒಂದೇ ತೆರನಾಗಿ ಪರಿಗಣಿಸಲಾಗುತ್ತಿದೆ. ಈ ಹಿಂದೆ ಡಬ್ಬಲ್ ಚೋಲ್ಗೆ ಹೆಚ್ಚು ದರ ಇದ್ದರೆ, ಸಿಂಗಲ್ ಚೋಲ್, ಹೊಸ ಅಡಿಕೆ ಅನಂತರದ ಸಾಲಿನಲ್ಲಿ ಧಾರಣೆ ಹೊಂದಿರುತ್ತಿದ್ದವು. ಈಗ ಸಿಂಗಲ್ ಚೋಲ್ ಅಡಿಕೆಗೆ ಹಾಗೂ ಡಬ್ಬಲ್ ಚೋಲ್ ಅಡಿಕೆಗೆ ಒಂದೇ ತರವಾದ ಬೆಲೆ ಇರುವುದರಿಂದ ಸಿಂಗಲ್ ಚೋಲ್ ಅಡಿಕೆ ಇದ್ದವರಿಗೆ ಲಾಭವಾಗಿದೆ. ಅಡಿಕೆ ಬೆಳೆಗಾರರ ಮುಖದಲ್ಲಿ ಎಂದೂ ಇಲ್ಲದ ಮನೋಹರ ಮಂದಹಾಸ ! ಇದೀಗ ಎಲೆ ಅಡಿಕೆ ಹಾಕಲೂ ಅಡಿಕೆ ಬೆಳೆಗಾರ ಹಿಂದುಮುಂದು ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ. ಅಷ್ಟು ಬೆಲೆಯ ಅಡಿಕೆ ಜಗಿಯಲು ಆತನ ಮನಸ್ಸೇ ಒಪ್ಪಿಕೊಳ್ಳುತ್ತಿಲ್ಲ!! ಅಡಿಕೆ ಬೆಲೆ ಮತ್ತಷ್ಟು ನುಗ್ಗಿ ಓಡಲಿ ಎನ್ನುವುದೇ ಕರಾವಳಿ ಮತ್ತು ಮಲೆನಾಡಿನ ಜೀವದಂತಿರುವ ಅಡಿಕೆ ಬೆಳೆಗಾರರ ಆಶಯ.