ಜುಲೈ 1 ರಿಂದ ಶಾಲೆ ಪ್ರಾರಂಭ | ಜೂನ್ 15ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭ
ಜುಲೈ 01 ರಿಂದ ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಆರಂಭವಾಗಲಿವೆ. ಆದ್ದರಿಂದ ಶಿಕ್ಷಕರು ಜೂನ್ 15 ರಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕು. ಪ್ರವೇಶ ಪ್ರಕ್ರಿಯೆಗಳನ್ನು ನಾಳೆಯಿಂದಲೇ (ಜೂನ್ 15) ಆರಂಭಿಸಬೇಕು. ಶಿಕ್ಷಕರು ಶಾಲೆಗೆ ಹಾಜರಾಗಿ ಶಾಲೆಗಳ ಸ್ವಚ್ಛತೆ, ದಾಖಲಾತಿ ಪ್ರಕ್ರಿಯೆ ಸೇರಿ ಶಾಲಾ ಪ್ರಾರಂಭಕ್ಕೆ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ನೀಡಲಾದ ಪರಿಷ್ಕೃತ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳಿಗೆ ಭೌತಿಕ ತರಗತಿ ನಡೆಸುವಂತಿಲ್ಲ. ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳನ್ನು ನಡೆಸಲು ಮಾತ್ರ ಅವಕಾಶ ನೀಡಲಾಗಿದೆ.
ಶಿಕ್ಷಕರು ಜೂ.15 ರಿಂದ 30 ರೊಳಗೆ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ಸದಸ್ಯರ ಸಭೆ ನಡೆಸಿ ಶಾಲೆ ಆರಂಭದ ಬಗ್ಗೆ ಚರ್ಚಿಸಬೇಕು. ಶಾಲಾ ವೇಳಾಪಟ್ಟಿ, ಶಿಕ್ಷಕರ ವೇಳಾಪಟ್ಟಿ, ಮುಖ್ಯ ಶಿಕ್ಷಕರು ತರಗತಿ ಶಿಕ್ಷಕರನ್ನು ನೇಮಿಸುವುದು, ಹಿಂದಿನ ವರ್ಷದ ಮಕ್ಕಳನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಿ ಹಾಜರಾತಿ ರಚಿಸಬೇಕು. ಹಾಜರಾತಿ ಆಂದೋಲನ ನಡೆಸಬೇಕು. ಅಲ್ಲದೇ ವಿದ್ಯಾರ್ಥಿಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ಕ್ಲಾಸ್ಗೆ ಅನುಕೂಲವಾಗುವ ಯಾವೆಲ್ಲಾ ದಾರಿಗಳಿವೆ ಎಂದು ಪಾಲಕರಿಂದ ಮಾಹಿತಿ ಸಂಗ್ರಹಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ.
ಜುಲೈ 01 ರಿಂದಲೇ ಶಾಲೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಗೆ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ತಿಳಿಸಲಾಗಿದೆ. ಇನ್ನೂ ಕೊರೋನಾ ಲಾಕ್ಡೌನ್ ಮುಂದುವರೆದಿರುವ ಜಿಲ್ಲೆಗಳಾದ ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕೋಡಿ, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಶಿಕ್ಷಕರು ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಪ್ರಸ್ತುತ ಸಾಲಿನ ಶೈಕ್ಷಣಿಕ ವರ್ಷದ ಪೂರ್ವ ತಯಾರಿಯನ್ನು ಮನೆಗಳಿಂದಲೇ ಮಾಡಿಕೊಳ್ಳಲು ಸೂಚಿಸಲಾಗಿದೆ.