ಉಡುಪಿಯಲ್ಲಿ ಒಬ್ಬ ಮ್ಯಾಗ್ನೆಟ್ ಮನುಷ್ಯ | ಕೋರೋನಾ ವ್ಯಾಕ್ಸಿನ್ ಹಾಕಿಸಿಕೊಂಡ ಮೇಲೆ ಹೀಗಾಯ್ತಾ ?!
ಉಡುಪಿ ಜಿಲ್ಲೆಯ ತೆಂಕಪೇಟೆಯ ನಿವಾಸಿಯೊಬ್ಬರ ದೇಹದಲ್ಲಿ ಅಯಸ್ಕಾಂತದ ಶಕ್ತಿ ಕಂಡುಬಂದಿದೆ. ಅವರ ಮೇಲೆ ಕಬ್ಬಿಣ ಸ್ಟೀಲ್ ಇಂಡೋಲಿಯಂ ಮುಂತಾದ ಕಾಂತೀಯ ವಸ್ತುಗಳು ಅಂಟುತ್ತಿವೆ. ಇಂತಹ ಒಂದು ವೀಡಿಯೋ ಉಡುಪಿ ಮತ್ತು ಆಸುಪಾಸಿನಲ್ಲಿ ಶೇರ್ ಆಗುತ್ತಿದೆ. ಕೋರೋನಾ ವ್ಯಾಕ್ಸಿನ್ ಹಾಕಿಸಿಕೊಂಡ ಮೇಲೆ ಹೀಗಾಗಿದೆ ಎಂದು ವೀಡಿಯೋ ವೈರಲಾಗಿದೆ.
ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ವ್ಯಕ್ತಿ ರಾಮದಾಸ್ ಶೆಟ್ ಎಂದು ಗುರುತಿಸಲಾಗಿದ್ದು, ಉಡುಪಿಯ ತೆಂಕಪೇಟೆಯ ಪೂರ್ಣಪ್ರಜ್ಞ ಕಾಲೇಜು ಸಮೀಪದ ವಾಸಿ. ಟಿವಿಯಲ್ಲಿ ಈ ಹಿಂದೆ ಪ್ರಸಾರವಾದ ವೀಡಿಯೋಗಳನ್ನು ನೋಡಿ, ಲಾಕ್ಡೌನ್ ಕಾರಣ ಮನೆಯಲ್ಲೇ ಇದ್ದ ರಾಮದಾಸ್ ತನ್ನನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆ. ಈ ವೇಳೆ ಕೆಲವೊಂದು ವಸ್ತುಗಳು ಅವರ ದೇಹಕ್ಕೆ ಅಂಟಿಕೊಂಡಿದ್ದು, ಅವರಿಗೆ ಆಶ್ಚರ್ಯವಾಗಿದೆ.
ವ್ಯಾಕ್ಸಿನ್ ಪಡೆಯೋ ಮೊದಲು ಈ ರೀತಿ ರಾಮದಾಸ್ ತಮ್ಮ ದೇಹದಲ್ಲಿ ಯಾವುದೇ ಇಂತಹ ಆಯಸ್ಕಾಂತೀಯ ಶಕ್ತಿ ಇದ್ದಿರಬಹುದಾದ ಬಗ್ಗೆ ಪ್ರಯೋಗ ನಡೆಸಿಲ್ಲವಂತೆ. ಹಾಗಾಗಿ ವ್ಯಾಕ್ಸಿನ್‍ಗೂ ಈ ಕಾಂತೀಯ ಶಕ್ತಿಯ ಬಗೆಗೂ ಸಂಬಂಧ ಇದೆಯೋ ಇಲ್ಲವೋ ಎಂದು ಹೇಳಲಾಗುವುದಿಲ್ಲ.
ಈ ಹಿಂದೆ ದೆಹಲಿ ಮತ್ತು ಇತರೆಡೆ ನಡೆದ ಇಂತಹ ಘಟನೆಯ ಬಗ್ಗೆ ಈಗಾಗಲೇ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು ವ್ಯಾಕ್ಸಿನ್ ಪಡೆಯುವುದರಿಂದ ಈ ರೀತಿ ಆಗುವುದಿಲ್ಲ ಯಾವುದೇ ಆತಂಕ ಬೇಡ ಎಂದು ಸ್ಪಷ್ಟ ಉತ್ತರ ನೀಡಿದ್ದಾರೆ. ಕೆಲವು ವ್ಯಕ್ತಿಗಳ ಮೈ ಪ್ರಕೃತಿಯಿಂದ ಅವರ ದೇಹದಲ್ಲಿ ಕಾಂತೀಯ ಶಕ್ತಿ ಉತ್ಪತ್ತಿ ಆಗುತ್ತದೆ. ಈ ಬಗ್ಗೆ ಆತಂಕ ಪಡೋ ಅಗತ್ಯ ಇಲ್ಲ. ಆದರೆ ಇದರ ಸಂಶೋಧನೆ ಆಗಬೇಕು ಎಂದು ಹಲವರು ಅಭಿಪ್ರಾಯಪಡುತ್ತಿದ್ದಾರೆ. ಹಲವು ವೈದ್ಯಕೀಯ ಸಂಸ್ಥೆಗಳು ಇರುವ ಉಡುಪಿಯಲ್ಲಿ ಕೆಲವು ವೈದ್ಯ ವಿದ್ಯಾರ್ಥಿಗಳು ಇದರ ಬಗ್ಗೆ ಸಂಶೋಧನೆ ನಡೆಸಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.