‘ಇವತ್ತು ತುಳುನಾಡ್ ಚಪ್ಪಲ್ ಬಂದಿದೆ. ನಾಳೆ ಬಿಕಿನಿಯೂ ಬರಬಹುದು ಹಾಕಿಕೊಂಡು ಮಜಾ ಮಾಡಿ, ಮತ್ತು ತುಳು ಧ್ವಜಕ್ಕೆ ಅವಮಾನದ ಪೋಸ್ಟ್ | ನಟಿ ಅದ್ವಿತಿ ಶೆಟ್ಟಿ ಆಕ್ರೋಶ
ತುಳು ಧ್ವಜ ಹೋಲುವಂತ ಚಪ್ಪಲಿ ವಿನ್ಯಾಸ ಮತ್ತು ಪೋಸ್ಟ್ ನೋಡಿ ನಟಿ ಅದ್ವಿತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ತುಳು ಧ್ವಜ ಹೋಲುವ ಚಪ್ಪಲಿ ವೈರಲ್ ಆಗುತ್ತಿದೆ. ‘ಇವತ್ತು ತುಳುನಾಡ್ ಚಪ್ಪಲ್ ಬಂದಿದೆ. ನಾಳೆ ಬಿಕಿನಿಯೂ ಬರಬಹುದು ಹಾಕಿಕೊಂಡು ಮಜಾ ಮಾಡಿ,’ ಎಂದು ಕಾಮೆಂಟ್ನಲ್ಲಿ ಚಪ್ಪಲಿ ಫೋಟೋ ಹಾಕಿದ ವ್ಯಕ್ತಿ ಬಗ್ಗೆ ಅದ್ವಿತಿ ಬೇಸರ ತೋಡಿಕೊಂಡಿದ್ದಾರೆ.
‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ತುಳುವಿಗೆ ಆದ ಅವಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇದನ್ನು ನಾನು ಒಪ್ಪಿಕೊಳ್ಳವುದಿಲ್ಲ. ತುಳು ನನ್ನ ಮಾತೃ ಭಾಷೆ. ನಾನು ಹೆಮ್ಮೆಯಿಂದ ಹೇಳಿಕೊಳ್ಳುವೆ, ನಾನು ತುಳುವ ಎಂದು. ಆದರೆ ಇದನ್ನು ನೋಡಲು ಬೇಸರವಾಗುತ್ತದೆ. ಈ ರೀತಿಯೂ ಮಾಡುತ್ತಾರೆ ಎಂದು ಇವತ್ತು ನನಗೆ ತಿಳಿದು ಬಂದಿದೆ. ಯಾರೂ ಯಾರ ಭಾಷೆ ಬಗ್ಗೆಯೂ ಕೆಟ್ಟದಾಗಿ ಮಾತನಾಡ ಬಾರದು. ನಮ್ಮ ಸುತ್ತು ತುಂಬಾ ವಿಚಾರಗಳು ನಡೆಯುತ್ತಿವೆ. ಅದರ ಬಗ್ಗೆ ಮಾತನಾಡಿ, ಅಲ್ಲಿ ಆಗುತ್ತಿರುವ ತಪ್ಪುಗಳನ್ನು ದೂರಿ. ಆದರೆ ಯಾಕೆ ಒಂದು ಭಾಷೆ ಬಗ್ಗೆ ಈ ರೀತಿ ದ್ವೇಷ ಹುಟ್ಟಿಸಿಕೊಳ್ಳುತ್ತೀರಾ? ನನಗೆ ಕನ್ನಡ ಎಷ್ಟು ಇಷ್ಟವೋ, ನನ್ನ ತುಳು ಅಂದ್ರೆ ಅಷ್ಟೇ ಇಷ್ಟ. ನಾನು ಹೆಮ್ಮೆಯ ಬಂಟ್. ಹೀಗೆ ಮಾಡಿರುವ ವ್ಯಕ್ತಿಗೆ ಆದಷ್ಟು ಬೇಗ ಶಿಕ್ಷೆ ಆಗಬೇಕು,’ ಎಂದು ಅದ್ವಿತಿ ಆಗ್ರಹಿಸಿದ್ದಾರೆ.
ಘಟನೆಯ ವಿವರ :
ಫೇಸ್ಬುಕ್ ಖಾತೆಯಲ್ಲಿ ಸೂರ್ಯ ಎನ್.ಕೆ (Soorya NK) ಎಂಬ ಹೆಸರಿನ ವ್ಯಕ್ತಿಯೋರ್ವ ತುಳುವರ ಧ್ವಜವನ್ನು ಚಪ್ಪಲಿಯಲ್ಲಿ ಚಿತ್ರಿಸುವ ಮೂಲಕ ಅಪಚಾರ ಎಸಗಿದ್ದಾನೆ. ಚಪ್ಪಲಿಯಲ್ಲಿ ತುಳುವರ ಸೂರ್ಯ-ಚಂದ್ರರಿರುವ ಚಿತ್ರವನ್ನು ಚಿತ್ರಿಸಿ “ಇವತ್ತು ತುಳುನಾಡ್ ಚಪ್ಪಲ್ ಬಂದಿದೆ, ನಾಳೆ ಬಿಕಿನಿಯೂ ಬರಬಹುದು. ಹಾಕಿಕೊಂಡು ಮಜಾ ಮಾಡಿ” ಎಂದು ಬರೆದುಕೊಂಡಿದ್ದಾನೆ. ಇದು ಕರಾವಳಿಯಲ್ಲಿನ ತುಳುವರ ಮನಸ್ಸಿಗೆ ನೋವನ್ನುಂಟುಮಾಡಿದ್ದು ಮಾತ್ರವಲ್ಲ ಕೆರಳಿಸಿದೆ.
ಕಿಡಿಗೇಡಿ ಚಪ್ಪಲಿಯಲ್ಲಿ ಚಿತ್ರಿಸಿರುವ ಈ ಕೆಂಪು ಬಣ್ಣದ ಸೂರ್ಯ-ಚಂದ್ರರಿರುವ ಧ್ವಜವು ಸಾಮಾನ್ಯವಾಗಿ ಕರಾವಳಿಯ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಕಾಣಸಿಗುತ್ತದೆ. ದೇಗುಲದ ರಥಗಳಲ್ಲಿ ಈ ಪವಿತ್ರವಾದ ಸೂರ್ಯ-ಚಂದ್ರರಿರುವ ಧ್ವಜವನ್ನು ಕಟ್ಟುತ್ತಾರೆ. ದೇವಸ್ಥಾನಗಳಲ್ಲಿ ಈ ಧ್ವಜಕ್ಕೆ ಪವಿತ್ರ ಸ್ಥಾನವಿದೆ.
ಸಮಾಜದಲ್ಲಿ ಈ ರೀತಿ ಅಶಾಂತಿ ಸೃಷ್ಟಿಸಲು ಹೊರಟಿರುವ ಕಿಡಿಗೇಡಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಂತಹ ನೀಚರಿಗೆ ಶಿಕ್ಷೆಯಾಗಬೇಕು ಎಂಬ ಕೂಗು ಕರಾವಳಿಯಲ್ಲಿ ಕೇಳಿಬರುತ್ತಿದೆ. ಇದೀಗ ತುಳು ಮೂಲದ ಕನ್ನಡ ನಟಿ ಅದ್ವಿತಿ ಶೆಟ್ಟಿ ತಮ್ಮ ಪ್ರತಿಭಟನೆಯನ್ನು ದಾಖಲು ಮಾಡಿದ್ದಾರೆ.