ಪೆಟ್ರೋಲ್ 100 ನಾಟೌಟ್ | ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳವಾಗುತ್ತಿರುವುದರ ವಿರುದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪುತ್ತೂರು ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ‘100 ನಾಟೌಟ್’ ಶೀರ್ಷಿಕೆಯಡಿ ಅರುಣಾ ಥಿಯೇಟರ್ ಬಳಿಯ ಕೆ.ವಿ ಶೆಣೈ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ಶನಿವಾರ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಮಾತನಾಡಿ ‘ಇಂದು ದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾಗುವುದು ನೋಡಿದಾಗ ದೇಶದಲ್ಲಿ ಅಚ್ಛೇ ದಿನ್ ಬಂದಿದೆ ಎಂದು ಕಾಣುತ್ತದೆ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಬ್ಯಾರಲ್ಗೆ 140 ಡಾಲರ್ ಬೆಲೆ ಇದ್ದಾಗ ನಮ್ಮಲ್ಲಿ 60 ರಿಂದ 70 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ದೊರೆಯುತ್ತಿತ್ತು,ಆದರೆ ಇಂದು ಬ್ಯಾರಲ್ಗೆ 60 ರೂಪಾಯಿ ಇದ್ದಾಗ ದುಪ್ಪಟ್ಟು ದರದಲ್ಲಿ ಗ್ರಾಹಕರಿಗೆ ಪೆಟ್ರೋಲ್ ದೊರೆಯುತ್ತಿದೆ ಅಂದಾಗ ವಿಶ್ವಕ್ಕೆ ಗುರು ಭಾರತ ಅನ್ನುವವರ ಆಡಳಿತ ವೈಖರಿ ಇದು ಎಂದು ಕಾಣುತ್ತದೆ.ಪೆಟ್ರೋಲ್ ಗೆ ಬೆಲೆ ಹೆಚ್ಚಾದರೆ ದಿನಬಳಕೆಯ ಎಲ್ಲಾ ವಸ್ತುಗಳಿಗೂ ದರ ಹೆಚ್ಚಳವಾಗುತ್ತದೆ ಆದ್ದರಿಂದ ಕೊರೋನ ಸಂಕಷ್ಟದ ಕಾಲದಲ್ಲೂ ಈ ರೀತಿ ಬೆಲೆ ಏರಿಕೆ ಆಗಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ತಕ್ಷಣ ಬೆಲೆ ಇಳಿಕೆ ಮಾಡಬೇಕು ಎಂದರು ‌

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ.ರೈ,ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ವಿ,ಜಿಲ್ಲಾ ಕಾಂಗ್ರೆಸ್ ಸದಸ್ಯ ಮಹಮ್ಮದ್ ಬಡಗನ್ನೂರು,ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೌಶಲ್ ಪ್ರಸಾದ್ ,ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರನಾಥ್ ಮಾತನಾಡಿ ಬೆಲೆ ಏರಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ಹೆಚ್ಚಳವಾದುದನ್ನು ವಿಭಿನ್ನವಾಗಿ ಪ್ರತಿಭಟಿಸಲಾಯಿತು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಪೆಟ್ರೋಲ್ ಪಂಪ್ ನಲ್ಲಿನ ಗ್ರಾಹಕರಿಗೆ ಸಿಹಿತಿಂಡಿ ವಿತರಣೆ ಮಾಡಿ ವಿಭಿನ್ನವಾಗಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ.ರೈ ಮಠಂತಬೆಟ್ಟು,ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಧ್ಯಕ್ಷೆ ವಿಶಾಲಾಕ್ಷಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ,ಪುತ್ತೂರು ಬ್ಲಾಕ್ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ,ಸಾಮಾಜಿಕ ಜಾಲತಾಣದ ಸಂಯೋಜಕ ಪೂರ್ಣೇಶ್, ಬ್ಲಾಕ್ ಕಾಂಗ್ರೆಸ್ ಖಜಾಂಜಿ ವಲೇರಿಯನ್ ಡಯಾಸ್,ರಾಜೀವ್ ಗಾಂಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಭಂಡಾರಿ,ನಗರಸಭೆ ಸದಸ್ಯ ರಿಯಾಜ್, ಹಾಗೂ ಪುತ್ತೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಬಿ. ಉಪಸ್ಥಿತರಿದ್ದರು.

Leave A Reply

Your email address will not be published.